Headlines

ಕ್ಲಾಸಿಕ್ 2025 ಜಾವೆಲಿನ್ ಸ್ಪರ್ಧೆ: ನೀರಜ್ ಚೋಪ್ರಾ ಚಿನ್ನದ ಸಾಧನೆ ಕಣ್ತುಂಬಿಕೊಂಡ ಬೆಂಗಳೂರು ಫ್ಯಾನ್ಸ್‌

ಬೆಂಗಳೂರು: ಒಲಿಂಪಿಂಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕ್ಲಾಸಿಕ್ 2025 ಅಂತಾರಾಷ್ಟ್ರೀಯ ಜಾವೆಲಿನ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕ್ರಿಕೆಟ್‌ ಪಂದ್ಯಕ್ಕೆ ನೆರೆದಂತೆ ಜನಸಾಗರವೇ ನೆರೆದಿತ್ತು. ತಮ್ಮ ನೆಚ್ಚಿನ ಕ್ರೀಡಾ ತಾರೆಯನ್ನು ಕಂಡ ಬೆಂಗಳೂರಿನ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಭರ್ತಿ 15 ಸಾವಿರಕ್ಕೂ ಅಧಿಕ ಪ್ರೇಕ್ಷಕರಿಂದ ತುಂಬಿದ್ದ ಕಂಠೀರವ ಕ್ರೀಡಾಂಗಣದಲ್ಲಿ ನೀರಜ್‌ ಚೋಪ್ರಾ ಎಲ್ಲರ ನಿರೀಕ್ಷೆಯಂತೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್‌

ಭಾರತದಲ್ಲಿ ಮೊತ್ತಮೊದಲಾಗಿ ನಡೆದ ಅಂತಾರಾಷ್ಟ್ರೀಯ ಜಾವೆಲಿನ್ ಸ್ಪರ್ಧೆ ‘ನೀರಜ್ ಚೋಪ್ರಾ ಕ್ಲಾಸಿಕ್ 2025’ನಲ್ಲಿ ಸ್ವತಃ ನೀರಜ್ ಚೋಪ್ರಾ ಸ್ವರ್ಣ ಪದಕ ಗೆದ್ದುಕೊಂಡರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 86.18 ಮೀಟರ್ ದೂರಕ್ಕೆ ಜಾವೆಲಿನ್‌ ಎಸೆದ ನೀರಜ್‌ ಚೋಪ್ರಾ ಪ್ರಥಮ ಸ್ಥಾನ ಪಡೆದಿದ್ದಾರೆ. ಬಲವಾಗಿ ಬೀಸುತ್ತಿದ್ದ ಗಾಳಿಯ ಹೊರತಾಗಿಯೂ ನೀರಜ್‌ ಚೋಪ್ರಾ 86.18 ಮೀಟರ್‌ ದೂರ ಜಾವೆಲಿನ್‌ ಎಸೆದು ಮತ್ತೊಮ್ಮೆ ತಮ್ಮ ಸಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಕೀನ್ಯಾದ 2016ರ ಒಲಿಂಪಿಕ್ ಬೆಳ್ಳಿಪದಕ ವಿಜೇತೆ ಜೂಲಿಯಸ್ ಯೆಗೋ 84.51 ಮೀಟರ್‌ ದೂರಕ್ಕೆ ಎಸೆದು ದ್ವಿತೀಯ ಸ್ಥಾನ ಪಡೆದುಕೊಂಡರು. ಶ್ರೀಲಂಕಾದ ಮಾಜಿ ಅಂಡರ್-16 ಕ್ರಿಕೆಟ್ ವೇಗದ ಬೌಲರ್ ರುಮೇಶ್ ಪಥಿರಾಗೆ (84.34 ಮೀಟರ್ ) ಮೂರನೇ ಸ್ಥಾನ ಲಭಿಸಿದೆ. ಭಾರತದ ಸಾಚಿನ್ ಯಾದವ್ (82.33 ಮೀಟರ್) ಪದಕ ಗಲ್ಲುವ ನಿರೀಕ್ಷೆ ಮೂಡಿಸಿದರೂ ನಾಲ್ಕನೇ ಸ್ಥಾನದಲ್ಲಿ ತೃಪ್ತಿಪಡಬೇಕಾಯಿತು. ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿ ಫೌಲ್ ಮಾಡಿದರೂ, ತಮ್ಮ ಎರಡನೇ ಪ್ರಯತ್ನದಲ್ಲಿ 82.99 ಮೀಟರ್ ದೂರಕ್ಕೆ ಜಾವೆಲಿನ್‌ ಎಸೆದು ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿದರು. ಬಳಿಕದ ಎಸೆತಗಳಲ್ಲಿ ಇನ್ನಷ್ಟು ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾದ ನೀರಜ್‌ ಅಂತಿಮವಾಗಿ 86.18 ಮೀಟರ್ ದೂರಕ್ಕೆ ಜಾವೆಲಿನ್‌ ಎಸೆದು ಮುನ್ನಡೆ ಕಾಯ್ದುಕೊಂಡರು.

ಕ್ರೀಡಾಂಗಣದಲ್ಲಿ ನೀರಜ್‌ ಮಿಂಚು

ಪ್ರೇಕ್ಷಕರ ಒಗ್ಗಟ್ಟಿನ ಕೂಗು ‘ನೀರಜ್, ನೀರಜ್’ ಕ್ರೀಡಾಂಗಣದೆಲ್ಲೆಡ ಮೊಳಗಿತ್ತು. 15,000ಕ್ಕೂ ಹೆಚ್ಚು ಜನ ಪ್ರೇಕ್ಷಕರು ಕೇವಲ ಜಾವೆಲಿನ್ ಸ್ಪರ್ಧೆಗಾಗಿ ಆಗಮಿಸಿದ್ದು, ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದೆ. 2021ರ ಟೋಕಿಯೊದಲ್ಲಿ ಒಲಿಂಪಿಕ್ ಇತಿಹಾಸ ಬರೆದ ನಂತರ, ನೀರಜ್ ಮೊದಲು ಭಾರತೀಯ ನೆಲದಲ್ಲಿ ವಿಶ್ವ ದರ್ಜೆಯ ಕ್ರೀಡಾ ಕೂಟದಲ್ಲಿ ಭಾಗಿಯಾಗಿದ್ದರು.

ಈ ಕ್ರೀಡಾಕೂಟ ಸ್ವದೇಶಿ ಕ್ರೀಡಾ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ಭಾರತ ವೇದಿಕೆಯಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!