Headlines

ರಾಜ್ಯಾದ್ಯಂತ ಏಕಕಾಲಕ್ಕೆ ಲೋಕಾಯುಕ್ತ ದಾಳಿ: 12 ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿ ಬಯಲು

ಇಂದು ಮಂಗಳವಾರ ಅಕ್ಟೋಬರ್ 14 ರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಏಕಕಾಲದಲ್ಲಿ 12 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ, ಅಕ್ರಮವಾಗಿ ಗಳಿಸಿದ್ದ ಸಂಪತ್ತು ಬಯಲಿಗೆಳೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬಂದ ದೂರುಗಳನ್ನು ಆಧರಿಸಿ ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ಹಾವೇರಿ, ಉಡುಪಿ, ಕಲಬುರ್ಗಿ, ಬೆಂಗಳೂರು ಸೇರಿ 40ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ಇಲಾಖೆ ಮಿಂಚಿನ ದಾಳಿ ನಡೆಸಿದೆ.

ಬೀದರ್ ಜಿಲ್ಲೆಯ ಔರಾದ್‌ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ದೂಳಪ್ಪ ಅವರ ಬೀದರ್‌ ನಗರದ ಗುರುನಾನಕ್‌ ಕಾಲೋನಿಯ ನಿವಾಸದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಇದೇ ವೇಳೆ ಲೋಕಾಯುಕ್ತ ಎಸ್‌‍ಪಿ ಸಿದ್ದರಾಜು, ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ಬೀದರ್ ಜಿಲ್ಲೆಯಾದ್ಯಂತ ಒಟ್ಟು 4 ಕಡೆ ದಾಳಿ ಮಾಡಲಾಗಿದೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಡ್ಯಾಳ ಗ್ರಾಮದ ನಿವಾಸ, ಔರಾದ್‌ನ ಸಹಾಯಕ ನಿದೇರ್ಶಕರ ಕಚೇರಿ ಮತ್ತು ಔರಾದ್‌ನ ಮುಧೋಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಸಿಬ್ಬಂದಿ ಅಲರ್ಟ್‌ ಆಗಿದ್ದಾರೆ. ಕಾವಲುಗಾರನಿಂದ ಬೀಗ ತೆಗೆಸಿ ಒಳಗೆ ತಪಾಸಣೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಕೆಲ ಹಿರಿಯ ಸಿಬ್ಬಂದಿಗಳು ಕಚೇರಿಗೆ ಆಗಮಿಸಿದ್ದಾರೆ. ಆದಾಗ್ಯೂ ಇಲ್ಲಿ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಹೊಳಲ್ಕೆರೆಯಲ್ಲೂ ಲೋಕಾ ರೇಡ್!

ಇದೇ ವೇಳೆ ಇಂದು ನಸುಕಿನ ಜಾವ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್‌ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಎಸ್ಪಿ ವಾಸುದೇವರಾಮ್‌‍, ಡಿವೈಎಸ್ಪಿ ಮೃತ್ಯುಂಜಯ, ಪಿಐ ಮಂಜುನಾಥ್‌ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಹಲವೆಡೆ ಶೋಧ ನಡೆಸಿದೆ.
ಹೊಳಲ್ಕೆರೆ ಪಟ್ಟಣದ
ತರಳಬಾಳು ನಗರದಲ್ಲಿರುವ ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್‌ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಮನೆಯಲ್ಲಿದ್ದವರೆಲ್ಲಾ ಶಾಕ್‌ ಆಗಿದ್ದಾರೆ. ಮನೆಯಲ್ಲಿ ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣ ಮತ್ತಿತರ ಬೆಲೆಬಾಳುವ ವಸ್ತುವನ್ನು ಪತ್ತೆ ಮಾಡಿದ್ದಾರೆ. ಇದೇ ವೇಳೆ ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದ ಮನೆಗಳು ಹಾಗು ಕಚೇರಿ ಮೇಲೂ ದಾಳಿ ನಡೆದಿದೆ.

ದಾವಣಗೆರೆಯಲ್ಲಿ ಕೆ.ಆರ್‌. ಐ.ಡಿ.ಎಲ್‌ ಸಹಾಯಕ ಇಂಜಿನಿಯರ್‌ ಜಗದೀಶ್‌ ನಾಯ್ಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಸ್‌‍ಡಿಎ ನಡುವಿನ ಮನೆ, ಕಚೇರಿ ಹಾಗು ಸಂಬಂಧಿಕರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಮೂಲಗಳ ಪ್ರಕಾರ ಇಬ್ಬರು ಅಧಿಕಾರಿಗಳಿಗೆ ಸೇರಿದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾವಣಗೆರೆ ಎಸ್ಪಿ ಎಂ.ಎಸ್‌‍ ಕೌಲಾಪುರೆ ನೇತೃತ್ವದ ತಂಡ ದಾಳಿ ನಡೆಸಿದೆ.

ಈ ಇಬ್ಬರು ಅಧಿಕಾರಿಗಳ ಮನೆಯಲ್ಲೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಿವೇಶನ, ಕೃಷಿ ಜಮೀನು ಸೇರಿದಂತೆ ಹಲವು ದಾಖಲಾತಿ ದೊರೆತಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಹಾಸನದ ಸತ್ಯಮಂಗಲ ಬಡಾವಣೆಯಲ್ಲಿರುವ ಆರೋಗ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕಿ ಜ್ಯೋತಿ ಮೇರಿ ಅವರ ಮನೆ ಹಾಗೂ ಕುವೆಂಪು ನಗರದಲ್ಲಿರುವ ಅವರ ತಂಗಿಯ ನಿವಾಸದ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ.

ಲೋಕಾಯುಕ್ತ ಎಸ್ಪಿ ಸ್ನೇಹಾ, ಡಿವೈಎಸ್‌‍ಪಿ ಸುರೇಶ್‌, ಇನ್ಸ್ ಪೆಕ್ಟರ್‌ ಶಿಲ್ಪಾ ಮತ್ತು ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಹಲವೆಡೆ ನಿವೇಶನ ಸೇರಿ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶೋಧ ಕಾರ್ಯಚರಣೆ ಇಂದು ಮಂಗಳವಾರ ಸಂಜೆವರೆಗೂ ಮುಂದುವರೆದಿದ್ದು ಅಧಿಕಾರಿಗಳು ಮನೆಗಳು ಹಾಗೂ ಆಸ್ಪತ್ರೆಗಳಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಹಾವೇರಿಯಲ್ಲೂ ಲೋಕಾ ದಾಳಿ!
ಇನ್ನು ಹಾವೇರಿ ಜಿಲ್ಲೆಯ ಸವಣೂರು ಪುರಸಭೆ ಮುಖ್ಯಾಧಿಕಾರಿ ಹಾಗೂ ರಾಣೆಬೆನ್ನೂರು ಆರ್‌.ಒ ಮನೆ ಮೇಲೆ ಲೋಕಾ ದಾಳಿ ನಡೆದಿದೆ.

ರಾಣೆಬೆನ್ನೂರು ನಗರದ ಎರಡು ಕಡೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಅಕ್ರಮ ಆಸ್ತಿ ಗಳಿಸಿದ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಇಲ್ಲಿಯ ಚೋಳಮರಡೇಶ್ವರ ನಗರದ ನಿವಾಸಿ ಸವಣೂರು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಡೇನೂರ ಹಾಗೂ ಸಿದ್ದೇಶ್ವರ ನಗರದ ನಿವಾಸಿ ರಾಣೆಬೆನ್ನೂರು ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಮನೆ ಮೇಲೆ ನಡೆದಿದೆ.

ಇಲ್ಲಿ ದಾವಣಗೆರೆ ಹಾಗೂ ಹಾವೇರಿ ಲೋಕಾಯುಕ್ತ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು ಮನೆಯಲ್ಲಿರುವ ದಾಖಲಾತಿ, ಚಿನ್ನಾಭರಣ ಹಾಗೂ ನಗದು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಲೋಕಾ ದಾಳಿಯಲ್ಲಿ ಚಿನ್ನಾಭರಣ, ನಿವೇಶನ ಸೇರಿ ಹಲವು ಅಕ್ರಮ ಸಂಪತ್ತು ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!