ದಾವಣಗೆರೆ: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಬುಧವಾರ (ಸೆ.17) ಚನ್ನಗಿರಿಯ ಮರಡಿ ಗ್ರಾಮಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸುಮಾರು 30 ಕಿ.ಮೀ ದೂರದ ಬೈಕ್ ಹಾಗೂ ಕಾರು ರ‍್ಯಾಲಿ ಏರ್ಪಡಿಸಲಾಗಿದೆ. ವಿಶೇಷವಾಗಿ, ಈ ಬಾರಿ ಬೈಕ್ ಮತ್ತು ಕಾರುಗಳ ಮುಂಭಾಗದಲ್ಲಿ ಜೆಸಿಬಿ ವಾಹನವನ್ನು ಸಂಚರಿಸಲು ತೀರ್ಮಾನಿಸಲಾಗಿದೆ.
ಮರಡಿ ಗ್ರಾಮದಲ್ಲಿ ನಡೆಯುತ್ತಿರುವ ಮಹಾಗಣಪತಿ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಭೆಯ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಭಾಗವಹಿಸುತ್ತಿದ್ದಾರೆ. ಶ್ರೀ ಬಸವೇಶ್ವರ ವಿನಾಯಕ ಗೆಳೆಯರ ಬಳಗದ ವತಿಯಿಂದ ಮಹಾಗಣಪತಿ ಮಹೋತ್ಸವದ ಅಂಗವಾಗಿ ಧರ್ಮ ಜಾಗೃತಿ ಸಭೆ ಆಯೋಜಿಸಲಾಗಿದೆ.
ದಾವಣಗೆರೆಯ ಬಾಡಾ ಕ್ರಾಸ್‌ನಿಂದ ಮರಡಿ ಗ್ರಾಮದವರೆಗೆ ಬೃಹತ್ ರ್ಯಾಲಿ ಸಾಗಲಿದೆ. ಮೊದಲು ಬೈಕ್‍ಗಳು ಮುನ್ನಡೆಸಲಿದ್ದು, ನಂತರ ಕಾರಿನಲ್ಲಿ ಯತ್ನಾಳ್ ಮತ್ತು ಈಶ್ವರಪ್ಪ ಗ್ರಾಮಕ್ಕೆ ತಲುಪಲಿದ್ದಾರೆ. ಜೆಸಿಬಿ ರ‍್ಯಾಲಿಯ ನಿರ್ಧಾರವು ಯಾವ ಸಂದೇಶವನ್ನು ನೀಡುತ್ತದೆ ಎಂಬುದನ್ನು ಯತ್ನಾಳ್ ಬುಧವಾರದ ತಮ್ಮ ಭಾಷಣದಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದೆ.

