Headlines

ಡ್ರಗ್ ಪೆಡ್ಲರ್ ಗಳಿಂದ ಕಮಿಷನ್ ಪಡೆದ ಆರೋಪ 11 ಪೊಲೀಸ್ ಸಿಬ್ಬಂದಿ ಅಮಾನತು!

ಬೆಂಗಳೂರು, ಸೆ.15 : ಡ್ರಗ್ ಪೆಡ್ಲರ್‌ಗಳಿಂದ ತಿಂಗಳ ಕಮೀಷನ್ ಪಡೆದ ಆರೋಪದ ಮೇಲೆ ಬೆಂಗಳೂರು ನಗರ ಪಶ್ಚಿಮ ವಿಭಾಗದ ಚಾಮರಾಜಪೇಟೆ ಮತ್ತು ಜೆಜೆ ನಗರ ಪೊಲೀಸ್ ಠಾಣೆಯ 11 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಆಗಸ್ಟ್ 22ರಂದು ಆರ್.ಆರ್ ನಗರ ಪೊಲೀಸರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ ಬಳಿಕ ಈ ಆರೋಪಗಳು ಬೆಳಕಿಗೆ ಬಂದವು. ತನಿಖೆಯಲ್ಲಿ ಪೊಲೀಸರ ಮೊಬೈಲ್ ಹಾಗೂ ಡ್ರಗ್ ಪೆಡ್ಲರ್‌ಗಳ ನಡುವೆ ನೇರ ಸಂಪರ್ಕಗಳಿರುವುದು ಪತ್ತೆಯಾಗಿ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಕ್ರಮ ಕೈಗೊಂಡಿದ್ದಾರೆ.

ಅಮಾನತು ಗೊಂಡವರಲ್ಲಿ ಚಾಮರಾಜಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಟಿ. ಮಂಜಣ್ಣ, ಹೆಡ್ ಕಾನ್ಸ್ಟೇಬಲ್ ರಮೇಶ್ ಹಾಗೂ ಶಿವರಾಜ್, ಕಾನ್ಸ್ಟೇಬಲ್‌ಗಳು ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್, ಜೆಜೆನಗರ ಠಾಣೆಯ ಎಎಸ್ಐ ಕುಮಾರ್ ಮತ್ತು ಮೂವರು ಕಾನ್ಸ್ಟೇಬಲ್‌ಗಳು ಸೇರಿದ್ದಾರೆ.

ಆರ್.ಆರ್ ನಗರ ಪೊಲೀಸರು ಸಲ್ಮಾನ್, ನಯಾಜುಲ್ಲಾ ಖಾನ್, ನಯಾಜ್ ಖಾನ್, ತಾಹೀರ್ ಪಟೇಲ್ ಸೇರಿದಂತೆ ಐವರು ಡ್ರಗ್ ಪೆಡ್ಲರ್‌ಗಳನ್ನು ಟಿಡಾಲ್ ಟ್ಯಾಬ್ಲೆಟ್ ಮಾರಾಟ ಮಾಡುವ ಸಂದರ್ಭದಲ್ಲಿ ಬಂಧಿಸಿ, ಸುಮಾರು ಸಾವಿರ ಟ್ಯಾಬ್ಲೆಟ್‌ಗಳನ್ನು ವಶಪಡಿಸಿಕೊಂಡಿದ್ದರು. ವಿಚಾರಣೆಯಲ್ಲಿ, ಸಲ್ಮಾನ್ ತನ್ನ ಅಕ್ರಮ ಚಟುವಟಿಕೆಗಳಿಗೆ ಪೊಲೀಸರ ರಕ್ಷಣೆ ಇತ್ತು ಎಂದು ಒಪ್ಪಿಕೊಂಡಿದ್ದಾನೆ.

ತಪಾಸಣೆಯಲ್ಲಿ, ಪ್ರತಿ ತಿಂಗಳು ಡ್ರಗ್ ಪೆಡ್ಲರ್‌ಗಳಿಂದ ಇಬ್ಬರು ಲಕ್ಷ ರೂಪಾಯಿವರೆಗೆ ಪೊಲೀಸರಿಗೆ ಲಂಚ ನೀಡಲಾಗುತ್ತಿತ್ತೆಂಬುದು ಬಹಿರಂಗವಾಗಿದೆ. ಇನ್ಸ್‌ಪೆಕ್ಟರ್‌ಗೆ ಒಂದು ಲಕ್ಷ, ಎಎಸ್ಐಗೆ 25 ಸಾವಿರ ಹಾಗೂ ಕಾನ್ಸ್ಟೇಬಲ್‌ಗಳಿಗೆ ತಲಾ 20 ಸಾವಿರ ರೂಪಾಯಿ ನೀಡಲಾಗುತ್ತಿತ್ತೆಂದು ಹೇಳಲಾಗಿದೆ.

ಕೆಲವರು ಡ್ರಗ್ ಪೆಡ್ಲರ್‌ಗಳೊಂದಿಗೆ ಪಾರ್ಟಿಗಳಲ್ಲಿಯೂ ಭಾಗವಹಿಸಿದ್ದರೆಂಬ ಮಾಹಿತಿ ಹೊರಬಿದ್ದಿದೆ.

ಕೆಂಗೇರಿ ವಿಭಾಗದ ಎಸಿಪಿ ಭರತ್ ರೆಡ್ಡಿ ಈ ವಿಷಯದ ವರದಿಯನ್ನು ಡಿಸಿಪಿ ಎಸ್. ಗಿರೀಶ್ ಅವರಿಗೆ ಸಲ್ಲಿಸಿದ್ದರು. ಬಳಿಕ ವಿಜಯನಗರ ಎಸಿಪಿ ಚಂದನ್ ಕುಮಾರ್ ಅವರಿಗೆ ಸಂಪೂರ್ಣ ತನಿಖೆ ಹಸ್ತಾಂತರಿಸಲಾಗಿದೆ. ತನಿಖೆಯ ಪ್ರಾಥಮಿಕ ಮಾಹಿತಿಯಂತೆ, ಕಳೆದ ಮೂರು-ನಾಲ್ಕು ವರ್ಷಗಳಿಂದ ಈ ಲಂಚದ ವ್ಯವಹಾರ ನಡೆಯುತ್ತಿತ್ತು ಎಂಬುದು ದೃಢಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!