Headlines

ಸೌಜನ್ಯ ಹತ್ಯೆಗೀಡಾಗಿ 13 ವರ್ಷ; ಮಂಡ್ಯದಲ್ಲಿ ಜಾಗೃತ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ವಿನೂತನ ಪ್ರತಿಭಟನೆ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರವಾಗಿ ಕೊಲೆಯಾಗಿ 13 ವರ್ಷ ಗತಿಸಿದ ಸಂದರ್ಭದಲ್ಲಿ  ಜಾಗೃತ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳು ಮಂಡ್ಯನಗರದಲ್ಲಿ ಗುರುವಾರ ಸಂಜೆ ಮೆಣದಬತ್ತಿಗಳನ್ನು ಬೆಳಗಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಸರ್ಕಾರವನ್ನು ಆಗ್ರಹಿಸಿದವು.

ಮಂಡ್ಯನಗರ ಸಂಜಯ ವೃತ್ತದಲ್ಲಿ ಜಾಗೃತ ಕರ್ನಾಟಕ ಸಂಘಟನೆಯ ಮುಖಂಡರು ಹಾಗೂ ವಿವಿಧ ಜನಪರ ಸಂಘಟನೆಗಳ ಮುಖಂಡರು ಪಾಲ್ಗೊಂಡು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.

ಜನಾಗ್ರಹದಲ್ಲೇನಿದೆ ? 

1. ಧರ್ಮಸ್ಥಳದ ಫಾಸಲೆಯಲ್ಲಿ ನಡೆದಿರುವ 400ಕ್ಕೂ ಹೆಚ್ಚು ಅಸಹಜ ಸಾವುಗಳ ಬಗ್ಗೆ ಕೂಲಂಕುಶವಾದ, ಗಂಭೀರವಾದ ತನಿಖೆ ನಡೆಸಲು ಸರ್ಕಾರ SIT ಗೆ ಸ್ಪಷ್ಟ ಆದೇಶ ಕೊಡಬೇಕು.

2. ಕುಮಾರಿ ಸೌಜನ್ಯಳ ಹತ್ಯೆ ಒಳಗೊಂಡಂತೆ ಧರ್ಮಸ್ಥಳದಲ್ಲಿ ಹತ್ಯೆಗೊಳಗಾದ ವೇದವಲ್ಲಿ, ಪದ್ಮಲತಾ, ಯಮುನಾ ಮತ್ತು ನಾರಾಯಣರವರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧತೆ ತೋರಬೇಕು. ಈ ಪ್ರಕರಣಗಳಲ್ಲಿ ತಪ್ಪಿಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ಸಮಗ್ರ ತನಿಖೆ ಕೈಗೊಳ್ಳುವಂತೆ SIT ಗೆ ಸ್ಪಷ್ಟ ಆದೇಶ ನೀಡಬೇಕು. (ಈ ನಿಟ್ಟಿನಲ್ಲಿ ಏನಾದರೂ ತಾಂತ್ರಿಕ ಅಡಚಣೆಗಳಿದ್ದರೆ ಸೂಕ್ತ ರೀತಿಯಲ್ಲಿ ನಿವಾರಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ)

3. ಈಗ ಮುಂದೆ ಬಂದಿರುವ ಹೊಸ ಸಾಕ್ಷಿದಾರರನ್ನು ಒಳಗೊಂಡು ಆಮೂಲಾಗ್ರವಾಗಿ ತನಿಖಾ ಪ್ರಕ್ರಿಯೆ ಮುಂದುವರೆಯಬೇಕು.

4. ನ್ಯಾಯಕ್ಕಾಗಿ ದನಿಯೆತ್ತುವವರಿಗೆ ಮತ್ತು ಸಾಕ್ಷಿದಾರರಿಗೆ ಕಿರುಕುಳ ನೀಡುವುದು ನಿಲ್ಲಬೇಕು. ಧರ್ಮಸ್ಥಳದಲ್ಲಿ ಗೂಂಡಾಗಿರಿ ಮುಂದುವರೆಸಿರುವ ದುಷ್ಟಶಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ ಘನಘೋರ ಪ್ರಕರಣಗಳಲ್ಲಿ ತಮ್ಮ ಸರ್ಕಾರ ರಾಜಿ ಮಾಡಿಕೊಳ್ಳದೆ ಅಪರಾಧಿಗಳನ್ನು ಪತ್ತೆಹಚ್ಚಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಮೂಲಕ ಕಾನೂನು ಆಡಳಿತದಲ್ಲಿ ಜನರಿಗೆ ವಿಶ್ವಾಸ ಮೂಡುವಂತೆ ಮಾಡಬೇಕೆಂದು ಮನವಿ ಮಾಡಿದರು.

SIT ತನಿಖೆ ಮೇಲೆ ರಾಜಕೀಯ ಒತ್ತಡ ನಿಲ್ಲಿಸಿ

ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿರುವ ಅಸಹಜ ಸಾವುಗಳು, ಅತ್ಯಾಚಾರ, ಕೊಲೆಗಳ ಬಗ್ಗೆ ವರದಿಯಾಗುತ್ತಿರುವ ಸುದ್ದಿಗಳನ್ನು ಕೇಳಿ ನಾಗರಿಕ ಸಮಾಜಕ್ಕೆ ಆಘಾತವಾಗಿದೆ. ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯ ಎಂಬುವವರ ದೂರನ್ನು ಆಧರಿಸಿ ತಮ್ಮ ಸರ್ಕಾರ SIT ರಚಿಸಿ, ತನಿಖೆ ಕೈಗೊಂಡ ಕ್ರಮವನ್ನು ನಾಗರಿಕ ಸಮಾಜ ಮುಕ್ತ ಕಂಠದಿಂದ ಶ್ಲಾಘಿಸಿದೆ. ಆದರೆ ಆರಂಭದ ದಿನದಿಂದಲೂ SIT ತನಿಖೆ ಬಗ್ಗೆ ತೀವ್ರ ರಾಜಕೀಯ ಒತ್ತಡ ಸೃಷ್ಟಿಯಾಗಿದ್ದನ್ನು ಕಂಡು ನಾಗರಿಕ ಸಮಾಜದಲ್ಲಿ ಆತಂಕ ಮನೆಮಾಡಿದೆ. ದುರುದ್ದೇಶಪೂರಿತ ರಾಜಕೀಯ ಒತ್ತಡಕ್ಕೆ ತಮ್ಮ ಸರ್ಕಾರ ಮಣಿದಂತೆ ಕಾಣುತ್ತಿದ್ದು, ಕುಂಟುನೆಪಗಳನ್ನು ಮುಂದೊಡ್ಡಿ SIT ತನಿಖೆಯನ್ನು ಮೊಟಕುಗೊಳಿಸುತ್ತಿರುವುದು ಎದ್ದು ಕಾಣುತ್ತಿದೆ. ನಮ್ಮ ಅನುಮಾನಕ್ಕೆ ಸ್ಪಷ್ಟ ಕಾರಣಗಳಿವೆ ಎಂದು ದೂರಿದರು.

• ಶವ ಹೊರತೆಗೆಯುವ (Exhumation) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದು ರಾಜಕೀಯ ಒತ್ತಡದಿಂದಲೇ ಹೊರತು ಯಾವುದೇ ಕಾನೂನಾತ್ಮಕ ಅಡಚಣೆಗಳಿಂದ ಅಲ್ಲವೇ ಅಲ್ಲ. ಇಂಥ ಅನೀತಿಯ ಕ್ರಮದಿಂದ ತನಿಖಾ ಪ್ರಕ್ರಿಯೆಗೆ ತೀವ್ರ ಹಿನ್ನಡೆಯಾಗಿದೆ ಎಂಬುದು ನಿರ್ವಿವಾದಿತ ಸತ್ಯ.

• ಚಿನ್ನಯ್ಯ ಎಂಬ ಸಾಕ್ಷಿ-ದೂರುದಾರ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಲು ಕಾರಣಗಳೇನು? ಅಂಥ ಒತ್ತಡ ಹೇರಿದ ಶಕ್ತಿಗಳು ಯಾವುವು ಎಂಬುದನ್ನು ಸೂಕ್ತವಾಗಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವುದರ ಬದಲಿಗೆ ಇದನ್ನೇ ನೆಪವನ್ನಾಗಿಸಿಕೊಂಡು SIT ತನಿಖೆಯನ್ನೇ ದುರ್ಬಲಗೊಳಿಸಲಾಗುತ್ತಿದೆ.

• ಹೊಸ ಸಾಕ್ಷಿದಾರರು ಮುಂದೆ ಬಂದು ಅಕ್ರಮವಾಗಿ ಹೂತಿಟ್ಟ ಶವಗಳನ್ನು ತಾವು ತೋರಿಸುವುದಾಗಿ ಖುದ್ದಾಗಿ ದೂರು ಕೊಟ್ಟಿದ್ದರೂ ಸರ್ಕಾರ / SIT ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ದೂರುದಾರರು ತಮ್ಮ ಸಾಕ್ಷಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಮೆಟ್ಟಲೇರಬೇಕಾಗಿ ಬಂದಿರುವುದು ಈ SIT ತನಿಖೆಯ ದುಸ್ಥಿತಿಗೆ ಹಿಡಿದ ಕನ್ನಡಿ.

• SIT ರಚನೆ ನಂತರ ಹಲವಾರು ಸಂತ್ರಸ್ತ ಕುಟುಂಬಗಳಲ್ಲಿ ಭರವಸೆ ಮೂಡಿ, ತಮ್ಮ ಕುಟುಂಬದ ಸದಸ್ಯರಿಗಾದ ಘೋರ ಅನ್ಯಾಯಗಳ ಬಗ್ಗೆ ಅಹವಾಲು ಸಲ್ಲಿಸಿ SIT ತನಿಖೆಯ ಮೂಲಕ ನ್ಯಾಯ ಒದಗಿಸಬೇಕೆಂದು ಬೇಡಿಕೊಂಡಿದ್ದಾರೆ. ಆದರೂ SIT ಯಿಂದ ಯಾವುದೇ ಸಕಾರಾತ್ಮಕ ಕ್ರಮಗಳಿಲ್ಲ. ಬದಲಿಗೆ ತಾಂತ್ರಿಕ ಕಾರಣಗಳ ಕುಂಟುನೆಪ ಹೇಳಿ ಸಾಗಿಹಾಕಲಾಗುತ್ತಿದೆ.

• RTI ಮೂಲಕ ಬಯಲಾಗಿರುವ ಅಧಿಕೃತ UDR ದಾಖಲೆಗಳ ಪ್ರಕಾರ ಧರ್ಮಸ್ಥಳ ಗ್ರಾಮದ ವಿವಿಧೆಡೆ ಶವಗಳು ಕಂಡುಬಂದ ದಿನವೇ “ಅಪರಿಚಿತ” ಎಂದು ಘೋಷಿಸಿ, ತರಾತುರಿಯಲ್ಲಿ ನೂರಾರು ಶವಗಳನ್ನು ಧಫನ್ ಮಾಡಿರುವುದು ಬೆಳಕಿಗೆ ಬಂದಿದೆ. ಇಂಥಾ ಘನಘೋರ ಕಾನೂನುಬಾಹಿರ ಅಕ್ರಮದಲ್ಲಿ ಪೊಲೀಸರು, ಪಂಚಾಯ್ತಿ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ತಮ್ಮ ಸರ್ಕಾರ ಇಂಥಾ ಘನಘೋರ ಅಪರಾಧವನ್ನು ಮುಚ್ಚಿಹಾಕಲು ಹೊರಟಿದೆಯೆ ಎಂಬ ಗಂಭೀರ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.

• ಈ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ದಾರುಣವಾಗಿ ಹತ್ಯೆಯಾದ ವೇದವಲ್ಲಿ, ಪದ್ಮಲತಾ, ಮಾವುತ ನಾರಾಯಣ ಮತ್ತು ಆತನ ತಂಗಿ ಯಮುನಾ – ಪ್ರಕರಣಗಳಲ್ಲಿ ಇದುವರೆಗೆ ಯಾವುದೇ ಅಪರಾಧಿಗಳು ಪತ್ತೆಯಾಗಿಲ್ಲ. ಸೌಜನ್ಯ ಎಂಬ 17 ವರ್ಷದ ವಿದ್ಯಾರ್ಥಿನಿ 2012ರ ಅಕ್ಟೋಬರ್ 9 ನೇ ತಾರೀಕು ಅತ್ಯಾಚಾರಕ್ಕೀಡಾಗಿ ಕೊಲೆಯಾಗಿ 13 ವರ್ಷಗಳೇ ಕಳೆದುಹೋಗಿವೆ. ಈ ಪ್ರಕರಣದಲ್ಲಿ ಒಬ್ಬ ಅಮಾಯಕನನ್ನು ದುರುದ್ದೇಶಪೂರಿತವಾಗಿ ಸಿಲುಕಿಸಿ, ನಿಜವಾದ ಅಪರಾಧಿಗಳು ತಪ್ಪಿಸಿಕೊಂಡಿದ್ದಾರೆ. ಸಂತೋಷ್ ರಾವ್ ಎಂಬ ಆ ಆರೋಪಿಗೂ ಈ ಅಪರಾಧಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ಹೀಗಿರುವಾಗ ಕಾನೂನು ಆಡಳಿತವನ್ನು ಎತ್ತಿಹಿಡಿದು, ಅಪರಾಧಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನು ಪ್ರಕ್ರಿಯೆಗೆ ಒಳಪಡಿಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕಾದ್ದು ತಮ್ಮ ಸರ್ಕಾರದ ಜವಾಬ್ದಾರಿಯಾಗಿದೆ. ತಾಂತ್ರಿಕ ಅಡಚಣೆಗಳ ಕುಂಟುನೆಪ ಮುಂದೊಡ್ಡಿ ಇಂಥಾ ಗುರುತರವಾದ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಬಾರದು.

• SIT ತನಿಖೆಯ ಪ್ರಕ್ರಿಯೆ ಇದುವರೆಗೂ ಯಾವುದೇ ಅಪರಾಧಿಗಳನ್ನು ಪತ್ತೆ ಹಚ್ಚಿದ್ದು ಕಂಡುಬರುತ್ತಿಲ್ಲ. ಬದಲಿಗೆ ಸಂತ್ರಸ್ತರ ಪರವಾಗಿ ನ್ಯಾಯಕ್ಕಾಗಿ ದನಿಯೆತ್ತಿದವರನ್ನು ಮತ್ತು ಸಾಕ್ಷಿದಾರರನ್ನು ಗುರಿಯಾಗಿಸಿಕೊಂಡು ಕಿರುಕುಳ ಕೊಡುತ್ತಿರುವ ನಿದರ್ಶನಗಳು ನಮ್ಮ ಮುಂದೆ ಸಾಕಷ್ಟಿವೆ.

• ಅಪರಾಧಿಗಳನ್ನು ಪತ್ತೆಹಚ್ಚುವ ಸದುದ್ದೇಶದಿಂದ SIT ರಚಿಸಿದ್ದ ಸರ್ಕಾರ ಈಗ ತನಿಖೆಯನ್ನು ಅವಸರವಾಗಿ, ಕಾಟಾಚಾರಕ್ಕೆ ಮಾಡಿ ಮುಗಿಸಿ ಕೈತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆಯೆ ಎಂಬ ಗಂಭೀರ ಅನುಮಾನ ದಟ್ಟವಾಗಿದೆ. ಸರ್ಕಾರದ ಪ್ರಮುಖರ ಹೇಳಿಕೆಗಳೇ ಇದಕ್ಕೆ ಸಾಕ್ಷಿ.

• ಸತ್ಯವನ್ನು ಜನರಿಗೆ ತಿಳಿಸುವ ಬದ್ಧತೆಯಿಂದ ಕೆಲಸ ಮಾಡುತ್ತಿದ್ದ ಸ್ವತಂತ್ರ ಪತ್ರಕರ್ತರ (YouTubers) ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ ಗೂಂಡಾಪಡೆ ತನ್ನ ಅಟ್ಟಹಾಸ ಮುಂದುವರೆಸಿದೆ. ಸತ್ಯವನ್ನು ವರದಿ ಮಾಡುವ ಪತ್ರಕರ್ತರು ಭಯಭೀತ ವಾತಾವರಣದಲ್ಲಿ ಕೆಲಸ ಮಾಡಬೇಕಾದ ದುಸ್ಥಿತಿಯಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಜಾಗೃತ ಕರ್ನಾಟಕದ ಸಂಚಾಲಕರಾದ ಎನ್.ನಾಗೇಶ್, ಪೃಥ್ವಿರಾಜ್, ಸಂತೋಷ ಜಿ. ನಗರಕೆರೆ ಜಗದೀಶ್, ಸುಬ್ರಮಣ್ಯ, ಅನಿತ್ ಕುಮಾರ್, ಪ್ರಶಾಂತ್, ಕರ್ನಾಟಕ ಜನಶಕ್ತಿ ಜಿಲ್ಲಾಧ್ಯಕ್ಷ ಕೃಷ್ಣ ಪ್ರಕಾಶ್, ಮಹಿಳಾ ಮುನ್ನೆಡೆಯ ಪೂರ್ಣಿಮ, ಶಿಲ್ಪಾ, ಮಂಜುಳ ಆಲದಹಳ್ಳಿ, ಹುರುಗಲವಾಡಿ ರಾಮಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!