ರಾಯಚೂರು, ಜುಲೈ 29: ರಾಜ್ಯಾದ್ಯಂತ ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಇಂತಹ ಸಂದರ್ಭದಲ್ಲೇ ಕೃಷಿಗೆ ಅತೀ ಅವಶ್ಯಕವಾಗಿರುವ ಯೂರಿಯಾ ಗೊಬ್ಬರದ ಕೊರತೆ ರಾಜ್ಯದೆಲ್ಲೆಡೆ ಇದೆ. ಈ ವೇಳೆ ರಾಯಚೂರು ಜಿಲ್ಲೆಯಲ್ಲಿ 79 ಟನ್ ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡಲಾಗಿದೆ. ಈ ಬಗ್ಗೆ ಜಿಲ್ಲೆಯ ರೈತರು ರಾಯಚೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ರಾಯಚೂರಿನ ಕಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋಡೌನ್ಗೆ ಹೋಗಬೇಕಿದ್ದ ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ.
ರಾಯಚೂರು ಜಿಲ್ಲಾ ಕೇಂದ್ರದ ಆರ್ಎಪಿಎಂಸಿಯಿಂದ ಜೂನ್ 19 ರಂದು 18 ಟನ್, ಜೂನ್ 26 ರಂದು 36 ಟನ್ ಹಾಗೂ ಜುಲೈ 4 ರಂದು 25 ಟನ್ ಯೂರಿಯಾ ಸೇರಿದಂತೆ ಒಟ್ಟು 79 ಟನ್ ಯೂರಿಯಾವನ್ನು ಕಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರಬರಾಜು ಮಾಡಲಾಗಿದೆ ಎಂದು ದಾಖಲೆಗಳಲ್ಲಿದೆ. ಆದರೆ, ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿಗೆ ಒಂದೇ ಒಂದು ಚೀಲ ಯೂರಿಯಾ ತಲುಪಿಲ್ಲ. ಮಾರ್ಗ ಮಧ್ಯದಲ್ಲೇ 79 ಟನ್ ಯೂರಿಯಾ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಇದಕ್ಕೆಲ್ಲ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಕಾರಣ ಅಂತ ರೈತರು ಆರೋಪಿಸಿದ್ದಾರೆ.
ಸಂಘದ ಸದಸ್ಯರುಗಳು, ನಿರ್ದೆಶಕರುಗಳಿಗೆ ಮಾಹಿತಿ ನೀಡದೆ ರೈತರಿಗೆ ಸಿಗಬೇಕಿದ್ದ ಯೂರಿಯಾವನ್ನ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಕೂಡಲೇ ಯೂರಿಯಾ ಕೊಡಿ, ಇಲ್ಲ ಸಂಘವನ್ನು ಸುಪರ್ ಸೀಡ್ ಮಾಡಿ ಎಂದು ರೈತರು ಜಿಲ್ಲಾಧಿಕಾರಿಗಳ ಎದುರು ಆಕ್ರೋಶ ಹೊರಹಾಕಿದರು.
ಕಾಳಸಂತೆಯಲ್ಲಿ ಯೂರಿಯಾ ಮಾರಾಟದ ಬಗ್ಗೆ ಮಾನ್ವಿ ತಾಲೂಕು ಕೃಷಿ ಇಲಾಖೆ ಅಧಿಕಾರಿಗಳಿಗೆ ರೂತರು ದೂರು ನೀಡಿದ್ದಾರೆ. ದೂರು ಪಡೆದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಮಾರಾಟ ಮಾಡಿರುವುದು ಬಯಲಾಗಿದೆ. ಅಧಿಕಾರಿಗಳ ಪರಿಶೀಲನೆ ವೇಳೆ ಯೂರಿಯಾ ಮಾರಾಟದ ರಸೀದಿಗಳು, ದಾಖಲೆಗಳು ಪತ್ತೆಯಾಗಿಲ್ಲ. ಹೀಗಾಗಿ ಕೃಷಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಉತ್ತರ ನೀಡದೆ ಇದ್ದರೇ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗತ್ತೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ಚೌಹ್ವಾಣ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕಿದೆ. ಕೂಡಲೇ ಕೃಷಿ ಇಲಾಖೆ ರೈತರಿಗೆ ಸಿಗಬೇಕಿದ್ದ ಯೂರಿಯಾ ಗೊಬ್ಬರ ತಲುಪಿಸಬೇಕಿದೆ.

