ಬೆಂಗಳೂರು, ಜುಲೈ 7: ಕಳೆದ 4 ತಿಂಗಳಿಂದ ರಾಜ್ಯಸರ್ಕಾರ ಪಡಿತರ ಆಹಾರಧಾನ್ಯ ಸಾಗಾಣಿಕೆ ವೆಚ್ಚ ನೀಡಿಲ್ಲ. 250 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಲಾರಿ ಮಾಲೀಕರು, ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆ ಮೂಲಕ ಈ ತಿಂಗಳ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ವಿ.ಆರ್.ಷಣ್ಮುಗಪ್ಪ, ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್ ಎಂದು ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವಿ.ಆರ್.ಷಣ್ಮುಗಪ್ಪ, ಯಾವುದೇ ಭರವಸೆ ಈಡೇರಿಸದ ಹಿನ್ನೆಲೆ ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್ ಎಂದಿದ್ದಾರೆ. ನಮ್ಮ ಖಾತೆಗೆ ಹಣ ಬರುವವರೆಗೂ ಮುಷ್ಕರ ಹಿಂಪಡೆಯಲ್ಲ ಎಂದು ಹೇಳಿದ್ದಾರೆ.
5 ತಿಂಗಳಿನಿಂದ 260 ಕೋಟಿ ರೂ. ಬಿಡುಗಡೆ ಆಗಬೇಕು. ಜೂನ್ 19ರಂದು 100 ಕೋಟಿ ರೂ. ಹಾಕುವುದಾಗಿ ಹೇಳಿದ್ದರು. ಆದರೆ ಈವರೆಗೂ 1 ರೂ. ಹಣ ಬಂದಿಲ್ಲ. ನಮ್ಮ ಖಾತೆಗೆ. ಆಹಾರ ಸಚಿವರು, ಅಧಿಕಾರಿಗಳು ಮಾತುಕತೆಗೆ ಕರೆದಿಲ್ಲ, ಹಾಗಾಗಿ ಇಂದಿನಿಂದ ಮುಷ್ಕರ ಮಾಡಲು ಮುಂದಾಗಿದ್ದೇವೆ. ಹಣ ಬಂದ ಮೇಲೆ ನಾವು ಅಕ್ಕಿ ಸರಬರಾಜು ಮಾಡಲು ಮುಂದಾಗುತ್ತೇವೆ ಎಂದಿದ್ದಾರೆ.
ರಾಜ್ಯಸರ್ಕಾರಕ್ಕೆ ಲಾರಿ ಮಾಲೀಕರ ಸಂಘ ಬಾಕಿ ಹಣ ಪಾವತಿ ಮಾಡಲು ಸರ್ಕಾರಕ್ಕೆ 15 ದಿನ ಗಡುವು ನೀಡಿತ್ತು. ಆದರೆ ಇದಕ್ಕೆ ಕ್ಯಾರೆ ಎಂದಿಲ್ಲ. ಇದರಿಂದ ಸಿಡಿದ 3-4 ಲಾರಿ ಮಾಲೀಕರು ಲಾರಿಗಳ ಸಂಚಾರವನ್ನೇ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ನೂರಾರು ಲಾರಿಗಳು ಬೆಂಗಳೂರಿನ ಯಶವಂತಪುರ ಡಿಪೋದಲ್ಲೇ ನಿಂತಿವೆ. ದಾವಣಗೆರೆಯಲ್ಲೂ ಲಾರಿ ಮಾಲೀಕರಿಗೆ 10 ಕೋಟಿ ರೂಪಾಯಿಯಷ್ಟು ಹಣ ಬಾಕಿ ಇದ್ದು, ಅಲ್ಲಿಯೂ ಲಾರಿ ಮಾಲೀಕರು ಮುಷ್ಕರ ಕೈಗೊಂಡಿದ್ದಾರೆ.

