Headlines

ಡಿಕೆಶಿ ಒಂದು ಕಾಲು ಬಿಜೆಪಿಯಲ್ಲಿಟ್ಟಿದ್ದಾರೆ: ಯತ್ನಾಳ್ ಬಾಂಬ್

ಬೆಂಗಳೂರು, ಆ.31: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಗಾಗಲೇ ತಮ್ಮ‌ ಒಂದು ಕಾಲನ್ನು ಬಿಜೆಪಿಯಲ್ಲಿ ಇಟ್ಟಿದ್ದಾರೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

“ಡಿ.ಕೆ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಆದರೆ ಅವರಿಗೆ ಶಾಸಕರ ಬೆಂಬಲ ಕಡಿಮೆ ಇದೆ ಎಂಬ ಕಾರಣಕ್ಕೆ ಅದು ಮುಂದುವರಿಯಲಿಲ್ಲ ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಿಷ್ಟು…
‘‘ಡಿ.ಕೆ ಶಿವಕುಮಾರ್ ಈಗಾಗಲೇ ಬಿಜೆಪಿಯಲ್ಲಿ ಒಂದು ಕಾಲು ಇಟ್ಟಾಗಿದೆ. ನಮ್ಮ ಮಹಾಮಹಿಮ ರಾಜ್ಯಾಧ್ಯಕ್ಷರ ಜೊತೆ ದೆಹಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆದಿದೆ. ಸುಮಾರು 60 ರಿಂದ 70 ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬಂದು ‘‘ನಮಸ್ತೇ ಸದಾ ವತ್ಸಲೇ’’ ಎಂದು ಹೇಳುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದರು. ಆದರೆ ಅಸಲಿಗೆ ಕಾಂಗ್ರೆಸ್ ನಲ್ಲಿ ಅವರಿಗೆ 12 ರಿಂದ 13 ಮಂದಿ ಶಾಸಕರ ಬೆಂಬಲವೂ ಇಲ್ಲ, ಎಲ್ಲರೂ ಸಿಎಂ ಸಿದ್ದರಾಮಯ್ಯ ಕಡೆ ಇದ್ದಾರೆ ಎಂಬುದು ಇಂಟಲಿಜೆನ್ಸ್ ಮಾಹಿತಿಯಿಂದ ತಿಳಿದುಬಂದಿತ್ತು. ಈ ಬಗ್ಗೆ ನಮ್ಮ ಹೈಕಮಾಂಡ್ ನಾಯಕರೇ ಒಬ್ಬರು ನನ್ನ ಬಳಿ ಕೇಳಿದ್ದರು. ಡಿ.ಕೆ ಶಿವಕುಮಾರ್ ಬಳಿ ಎಷ್ಟು ಕಾಂಗ್ರೆಸ್ ಶಾಸಕರಿದ್ದಾರೆ ಎಂದು ಕೇಳಿದ್ದರು. ಒಂದು ಹತ್ತು ಮಂದಿ ಇರಬಹುದು. ಬಿಜೆಪಿಗೆ ಬರುತ್ತಾರೆಂದು ಗೊತ್ತಾದರೆ ಅವರು ಕೂಡ ಇರಲಿಕ್ಕಿಲ್ಲ ಎಂದು ಹೇಳಿದ್ದೆ’’ ಎಂದು ಯತ್ನಾಳ್ ಹೇಳಿದ್ದಾರೆ.

ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ಮಾಡುತ್ತಾರೆ. ಆದರೂ ಒಂದೆರಡು ವರ್ಷ ಅವರೇ ಸರ್ಕಾರ ಮುನ್ನಡೆಸಲಿ. ಇವರಿಬ್ಬರು (ಡಿ.ಕೆ ಶಿವಕುಮಾರ್ ಮತ್ತು ವಿಜಯೇಂದ್ರ) ಭ್ರಷ್ಟರು ಸೇರಿದರೆ ಕರ್ನಾಟಕವನ್ನೇ ಮಾರಾಟ ಮಾಡಿಬಿಟ್ಟಾರು ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಸಗಣಿ ಮೇಲೆ ಕಲ್ಲು ಹಾಕಲು ಇಷ್ಟ ಇಲ್ಲ: ಡಿ.ಕೆ.ಶಿ ತಿರುಗೇಟು

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಡಿ.ಕೆ ಶಿವಕುಮಾರ್, ಸಗಣಿ ಮೇಲೆ ಕಲ್ಲು ಹಾಕಲು ಇಷ್ಟ ಇಲ್ಲ ಎಂದು ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರು ಹೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿ ಅವರು, ನೋಡಿ ಆ ಕಸ, ಸಗಣಿ ಮೇಲೆ ಕಲ್ಲು ಹಾಕಲು ನನಗೆ ಇಷ್ಟವಿಲ್ಲ ಎಂದು ಉತ್ತರಿಸಿದರು.

Leave a Reply

Your email address will not be published. Required fields are marked *

error: Content is protected !!