ಬೆಂಗಳೂರು, ಸೆಪ್ಟೆಂಬರ್ 2: ರಾಹುಲ್ ಗಾಂಧಿ ಮಾಡಿರುವ ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಹಕಾರ ಸಚಿವ ಕೆ ಎನ್ ರಾಜಣ್ಣ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು. ರಾಹುಲ್ ಹೇಳಿಕೆಯನ್ನು ಅಲ್ಲಗಳೆದು ಸ್ವಪಕ್ಷದ ವಿರುದ್ಧವೇ ಮಾತನಾಡಿದ್ದ ರಾಜಣ್ಣ ಅವರ ವಿರುದ್ಧ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ಕೆ ಎನ್ ರಾಜಣ್ಣ ಸಚಿವ ಸ್ಥಾನ ಕಳಕೊಂಡಿದ್ದು ಅಂತಾನೂ ಹೇಳಲಾಗುತ್ತಿದೆ. ಈ ಬೆನ್ನಲ್ಲೇ ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ ಅವರು ಕೆ ಎನ್ ರಾಜಣ್ಣ ಬಿಜೆಪಿ ಸೇರ್ತಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದರು. ಇದೀಗ ಕೈ ಶಾಸಕರ ಹೇಳಿಕೆಗೆ ರಾಜಣ್ಣ ಪುತ್ರ ರಾಜೇಂದ್ರ ತಿರುಗೇಟು ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಆಪ್ತ, ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಕೆ.ಎನ್. ರಾಜಣ್ಣ ಅವರು ಬಿಜೆಪಿಗೆ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಸ್ಫೋಟಕ ಹೇಳಿಕೆ ಕೊಟ್ಟಿದ್ದರು. ಈ ಆರೋಪವು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ರಾಜಣ್ಣ ಅವರ ರಾಜಕೀಯ ಭವಿಷ್ಯದ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು. ಕೈ ಶಾಸಕರೇ ಈ ರೀತಿ ಹೇಳಿಕೆ ಕೊಟ್ಟಿರುವುದು ಭಾರೀ ಗೊಂದಲ ಸೃಷ್ಟಿಸಿತ್ತು. ಇದೀಗ ಈ ಹೇಳಿಕೆಗೆ ರಾಜಣ್ಣ ಪುತ್ರ ರಾಜೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಕೃಷ್ಣ ಎಲ್ಲಾ ಪಕ್ಷವನ್ನು ಮುಗಿಸಿ ಕಾಂಗ್ರೆಸ್‌ಗೆ ಬಂದಿದ್ದಾರೆ; ರಾಜೇಂದ್ರ
ಕೆ.ಎನ್.ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ ಎಂಬ ಮಾಗಡಿ ಬಾಲಕೃಷ್ಣ ಹೇಳಿಕೆ ಹಿನ್ನೆಲೆ ರೊಚ್ಚಿಗೆದ್ದ ಎಂಎಲ್‌ಸಿ ರಾಜೇಂದ್ರ ಅವರು ಬಾಲಕೃಷ್ಣಗೆ ತಿರುಗೇಟು ಕೊಟ್ಟಿದ್ದಾರೆ. ಬಾಲಕೃಷ್ಣ ಎಲ್ಲಾ ಪಕ್ಷವನ್ನ ಮುಗಿಸಿದ್ದಾರೆ, ಜೆಡಿಎಸ್ ಬಿಜೆಪಿ ಎಲ್ಲಾ ಆದ ನಂತರ ಈಗ ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಕಾಣದ ಕೈಗಳ ಷಡ್ಯಂತ್ರ…
ಕಾಣದ ಕೈಗಳಿಂದ ರಾಜಣ್ಣನವರನ್ನು ಮಂತ್ರಿಗಿರಿಯಿಂದ ತೆಗೆದ್ರು, ಕೆಲವರಿಗೆ ಮಾತನಾಡುವ ತೆವಲು. ತೀಟೆ ತೀರಿಸಿಕೊಳ್ಳಲು ಈ ರೀತಿ ಮಾತನಾಡ್ತಾರೆ. ಈ ಮೂಲಕ ರಾಜಣ್ಣನವರು ಪಕ್ಷ ಬಿಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ರಾಜಣ್ಣನವರೇನು ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿಲ್ವಲ್ಲ. ಚಡ್ಡಿ ಹಾಕೊಂಡು ಆರ್‌ಎಸ್‌ಎಸ್ ಶಾಖೆಗಳಿಗೆ ಹೋಗಿಲ್ವಲ್ಲ. ಬಾಲಕೃಷ್ಣ ಮಾತನಾಡಿದ ಕೂಡಲೇ ಯಾರನ್ನೋ ಮೆಚ್ಚಿಸಿದೆ ಅನ್ಕೊಂಡಿರಬಹುದು, ರಾಜಣ್ಣ ಹೇಳಿದಂತೆ ಇವರೆಲ್ಲಾ ಬಿಜೆಪಿಗೆ ಹೋದರೂ ಆಶ್ಚರ್ಯ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪಕ್ಷ ಬಿಡುವ ಮಾತೇ ಇಲ್ಲ!
ರಾಜಣ್ಙನವರಾಗಲಿ ನಾನಾಗಲಿ ಪಕ್ಷ ಬಿಡಲ್ಲ. ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಯಾರನ್ನಾದರು ಓಲೈಸಬೇಕಾದ್ರೆ ರಾಜಣ್ಣನವರ ವಿರುದ್ದವೇ ಮಾತನಾಡಬೇಕು. ಸಿಎಂ ಸ್ಥಾನ ಕೊಡ್ತೀವಿ ಅಂದ್ರೆ ಇವರೆಲ್ಲಾ ಬಿಜೆಪಿಗೆ ಹೋದರೂ ಆಶ್ಚರ್ಯ ಇಲ್ಲ ಎಂದು ಹೇಳುವ ಮೂಲಕ ಶಾಸಕ ಬಾಲಕೃಷ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆಗಿರುವ ತಪ್ಪಿಗೆ ರಾಜಣ್ಣಗೆ ಮಂತ್ರಿ ಸ್ಥಾನ ಮತ್ತೆ ಕೊಡಬೇಕು ಅಂತ ಪ್ರತಿಭಟನೆಗಳು ಆಗ್ತಿವೆ. ಸ್ವಾಮೀಜಿಗಳೆಲ್ಲಾ ಮನೆಗೆ ಬಂದು ರಾಜಣ್ಣ ಪರ ಮಾತನಾಡಿದ್ದಾರೆ. ಇವರೆಲ್ಲಾ ಸೇರಿ ತಾನೆ ಮಂತ್ರಿಗಿರಿಯಿಂದ ತೆಗೆಸಿರೋದು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ ಕ್ರಾಂತಿಯಾಗುತ್ತೆ ಎಂದ ರಾಜೇಂದ್ರ!
ರಾಜಣ್ಣ ಅವರು ಈ ಹಿಂದೆ ಉಲ್ಲೇಖಿಸಿದ್ದ “ಸೆಪ್ಟೆಂಬರ್ ಕ್ರಾಂತಿ” ಕುರಿತು ಮಾತನಾಡಿದ ರಾಜೇಂದ್ರ, “ಬಾಲಕೃಷ್ಣರಿಂದಲೇ ಸೆಪ್ಟೆಂಬರ್ ಕ್ರಾಂತಿ ಶುರುವಾಗಬಹುದು. ಅವರ ತಂಡವೇ ಬಿಜೆಪಿಗೆ ಹೋಗಬಹುದು,” ಎಂದು ಖಡಕ್ ಆಗಿ ಹೇಳಿದರು. ಸೆಪ್ಟೆಂಬರ್ ಕ್ರಾಂತಿ ಅಂದ್ರೆ ಇವರೆಲ್ಲಾ ಬಿಜೆಪಿಗೆ ಹೋಗ್ತಾರೆ ಎಂದು ಹೇಳಿದ್ದಾರೆ.
ಷಡ್ಯಂತ್ರ ಮಾಡಿಯೇ ತಾನೆ ರಾಜಣ್ಣನವರನ್ನ ಸಚಿವ ಸ್ಥಾನದಿಂದ ತೆಗೆದಿದ್ದಾರೆ. ಇನ್ನೂ ಹತ್ತು ವರ್ಷ ಹೋದರೂ ನಾವು ಸಿಎಂ ಪರನೇ, ಸಿಎಂ ಪರ ಇರುವುದರಿಂದಲೇ ನಾವು ಇಷ್ಟು ಧೈರ್ಯವಾಗಿರೋದು ಎಂದು ಹೇಳಿದ್ದಾರೆ. ಇನ್ನು ಸೆಪ್ಟೆಂಬರ್‌ನಲ್ಲಿ ಬಾಲಕೃಷ್ಣ ಅವರ ಬ್ರೈನ್ ಮ್ಯಾಪ್ ಮಾಡಿ ಎಂದು ಹೇಳಿರುವ ರಾಜೇಂದ್ರ, ಯಾರ್ಯಾರು ಯಾರ್ಯಾರ ಸಂಪರ್ಕದಲ್ಲಿದ್ದಾರೆ ಅಂತ ಗೊತ್ತಾಗುತ್ತೆ ಎಂದು ಹೇಳಿ ಡಿಕೆಶಿ ಬಣದ ವಿರುದ್ದ ರಾಜಣ್ಣ ಪುತ್ರ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಬಹಿರಂಗವಾಗಿ ಯಾರಾದ್ರೂ ರಾಜಣ್ಣ ಅವರನ್ನು ಬಿಜೆಪಿಯವರು ಭೇಟಿಯಾಗಿಲ್ಲ. ರಾಜಣ್ಣ ಅವರನ್ನು ಸಂಚು ಪಿತೂರಿಯಿಂದ ರಾಜೀನಾಮೆ ಪಡೆದಿದ್ದಾರೆ ಬಿಟ್ಟರೆ, ರಾಜಣ್ಣ ಭ್ರಷ್ಟಾಚಾರ ಮಾಡಿ ಸಚಿವ ಸ್ಥಾನ ಬಿಟ್ಟಿಲ್ವಲ್ಲಾ? ರಾಜಣ್ಣ ಯಾವತ್ತೂ ಪಕ್ಷದ ವಿರುದ್ದ ಮಾತಾಡಿಲ್ವಲ್ಲ? ಎಂದು ರಾಜೇಂದ್ರ ರಾಜಣ್ಣ ಗುಡುಗಿದ್ದಾರೆ.

