Headlines

ಐಶ್ವರ್ಯಗೌಡ ಚಿನ್ನ ವಂಚನೆ ಕೇಸ್: ಇ.ಡಿಯಿಂದ ಡಿ.ಕೆ ಸುರೇಶ್ ವಿಚಾರಣೆ

ಬೆಂಗಳೂರು, ಜುಲೈ 8: ಐಶ್ವರ್ಯಗೌಡ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ಕೇಂದ್ರ ಜಾರಿ ನಿರ್ದೇಶನಾಲಯ 2ನೇ ಬಾರಿಗೆ ವಿಚಾರಣೆಗೊಳಪಡಿಸಿದೆ.

ಐಶ್ವರ್ಯಗೌಡ ಹಲವಾರು ಮಂದಿಗೆ ಚಿನ್ನ ವ್ಯಾಪಾರದ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ್ದರು. ಈ ವೇಳೆ ಆಕೆ ತಾವು ಡಿ.ಕೆ.ಸುರೇಶ್‌ರವರ ಸಹೋದರಿ ಎಂದು ಹೇಳಿಕೊಂಡಿದ್ದರು. ನಟರೊಬ್ಬರು ಡಿ.ಕೆ.ಸುರೇಶ್‌ರವರ ಧ್ವನಿಯನ್ನು ಮಿಮಿಕ್ರಿ ಮಾಡಿ ಉದ್ಯಮಿಗಳ ಜೊತೆ ಮಾತನಾಡಿದ್ದರು. ಬಹುಕೋಟಿ ಹಗರಣವನ್ನು ವಿಚಾರಣೆ ನಡೆಸುತ್ತಿರುವ ಕೇಂದ್ರ ಜಾರಿ ನಿರ್ದೇಶನಾಲಯ ಡಿ.ಕೆ.ಸುರೇಶ್‌ರವರಿಗೆ ನೋಟಿಸ್ ನೀಡಿತ್ತು.

ಕಳೆದ ಜೂನ್ 23 ರಂದು ಡಿ.ಕೆ.ಸುರೇಶ್‌ ವಿಚಾರಣೆಗೆ ಹಾಜರಾಗಿದ್ದರು. ಮತ್ತಷ್ಟು ಮಾಹಿತಿ ಸಂಗ್ರಹಕ್ಕಾಗಿ ಕೇಂದ್ರ ಜಾರಿ ನಿರ್ದೇಶನಾಲಯ 2ನೇ ಬಾರಿ ನೋಟಿಸ್‌‍ ನೀಡಿದ್ದು, ಅದರಂತೆ ಇಂದು ಡಿ.ಕೆ.ಸುರೇಶ್‌ ವಿಚಾರಣೆಗೆ ಹಾಜರಾಗಿದ್ದರು. ಅವರ ಜೊತೆ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಮತ್ತಿತರರು ಹಾಜರಿದ್ದರು.

ಆದರೆ ಎಲ್ಲರನ್ನೂ ಹೊರಗಿರಿಸಿ ಡಿ.ಕೆ.ಸುರೇಶ್‌ರವರನ್ನು ಮಾತ್ರ ಕಚೇರಿ ಒಳಗೆ ಕರೆದುಕೊಂಡ ಇ.ಡಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಹಲವು ರೀತಿಯ ಪ್ರಶ್ನೆಗಳನ್ನು ಡಿ.ಕೆ.ಸುರೇಶ್‌ಗೆ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಐಶ್ವರ್ಯಗೌಡ ಅವರ ವಂಚನೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಡಿ.ಕೆ.ಸುರೇಶ್‌ ಹಲವಾರು ಬಾರಿ ಪ್ರಸ್ತಾಪಿಸಿದ್ದಾರೆ. ಆಕೆಯ ವಿರುದ್ಧ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬೆಂಗಳೂರು ಪೊಲೀಸ್‌‍ ಆಯುಕ್ತರಿಗೆ ಡಿ.ಕೆ.ಸುರೇಶ್‌ ದೂರು ನೀಡಿದ್ದರು.ಅದರ ಹೊರತಾಗಿಯೂ ಡಿ.ಕೆ ಸುರೇಶ್ ಅವರನ್ನು ಇ.ಡಿ ನಿರಂತರವಾಗಿ ಸತತ ವಿಚಾರಣೆ ನಡೆಸುತ್ತಿದೆ.

Leave a Reply

Your email address will not be published. Required fields are marked *

error: Content is protected !!