ಬೆಂಗಳೂರು, ಸೆ.17 : ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಮೂರು ಬ್ಯಾಂಕ್ ಖಾತೆಗಳನ್ನು ಸೈಬರ್ ಅಪರಾಧಿಗಳು ಹ್ಯಾಕ್ ಮಾಡಿ ಸುಮಾರು 3 ಲಕ್ಷ ರೂ. ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನಾಚರಣೆಯ ಅಂಗವಾಗಿ ನಗರದಲ್ಲಿನ ಆರ್‌ಎಂವಿ ಎಕ್ಸ್‌ಟೆನ್ಷನ್ ಬಿಬಿಎಂಪಿ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ ನಡೆದ 75 ಪೌರ ಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸದಾನಂದ ಗೌಡ, ತಮಗೆ ಸಂಭವಿಸಿದ ವಂಚನೆ ಕುರಿತು ವಿವರಿಸಿದರು.
“ನಿನ್ನೆ ನನ್ನ ಮೂರು ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಪ್ರತಿಯೊಂದು ಖಾತೆಯಿಂದ ಒಂದೊಂದು ಲಕ್ಷ ರೂ. ಕಳವುಗೊಂಡಿದೆ. ಒಟ್ಟು 3 ಲಕ್ಷ ರೂ. ಹಾನಿಯಾಗಿದೆ. ಎಚ್‌ಡಿಎಫ್‌ಸಿ, ಎಸ್‌ಬಿಐ ಹಾಗೂ ಆಕ್ಸಿಸ್ ಬ್ಯಾಂಕ್ ಖಾತೆಗಳನ್ನು ಯುಪಿಐ ಮೂಲಕ ಹ್ಯಾಕ್ ಮಾಡಿ ಹಣ ಕದ್ದಿದ್ದಾರೆ. ಈ ಕುರಿತು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಸಲ್ಲಿಸಲಿದ್ದೇನೆ” ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ನಟ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಅವರ ಹೆಸರಿನಲ್ಲಿ ಸಹ ಇದೇ ರೀತಿಯ ಸೈಬರ್ ವಂಚನೆ ನಡೆದಿದೆ. ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ, ಮಗನಿಗೆ ತಾಯಿಯೇ ಹಣ ಕಳುಹಿಸುವಂತೆ ಸಂದೇಶ ಕಳುಹಿಸಲಾಗಿತ್ತು. ಮಗ ನಂಬಿ ಹಣ ಕಳುಹಿಸಿದ ಪರಿಣಾಮ ಮೋಸಕ್ಕೆ ಗುರಿಯಾಗಿದ್ದ ಘಟನೆ ಇದೀಗ ಚರ್ಚೆಯಾಗುತ್ತಿದೆ.

