Headlines

ಶಾಸಕ ಮುನಿರತ್ನ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ: ಬಿ.ರಿಪೋರ್ಟ್ ಹಿನ್ನೆಲೆ ಅರ್ಜಿ ವಜಾ

ಬೆಂಗಳೂರು, ಸೆ.17: ಸಾಮೂಹಿಕ ಅತ್ಯಾಚಾರ ಆರೋಪ ಸಂಬಂಧ ಬಿಜೆಪಿ ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧ ವಿಶೇಷ ತನಿಖಾ ದಳವು (ಎಸ್‌ಐಟಿ) ವಿಚಾರಣಾಧೀನ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಿರುವುದರಿಂದ ಈ ಸಂಬಂಧದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಯಶವಂತಪುರದ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮುನಿರತ್ನ, ವಸಂತ ಕುಮಾರ್‌, ಚನ್ನಕೇಶವ್‌ ಮತ್ತು ಕಮಲ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ಪೀಠ ಬುಧವಾರ ಈ ಆದೇಶ ನೀಡಿತು.

ಎಸ್ಐಟಿ ವಿಚಾರಣಾಧೀನ ನ್ಯಾಯಾಲಯಕ್ಕೆ (42ನೇ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್) ಬಿ.ರಿಪೋರ್ಟ್ ಸಲ್ಲಿಸಿದ್ದು, ಅದನ್ನು ಒಪ್ಪಿಕೊಳ್ಳಲಾಗಿದೆ.
ಇದರಿಂದ ಶಾಸಕ ಮುನಿರತ್ನ ವಿರುದ್ಧದ ಅರ್ಜಿಗಳು ಅಸ್ತಿತ್ವ ಕಳೆದುಕೊಂಡಿರುವುದರಿಂದ, ಅವುಗಳನ್ನು ವಜಾ ಮಾಡಲಾಗಿದೆ ಎಂದು ನ್ಯಾಯಪೀಠ ಆದೇಶಿಸಿದೆ.

ಸಿಒಡಿ ಪರ ಹಾಜರಾಗಿದ್ದ ಸರಕಾರಿ ವಕೀಲರು, ಎಸ್‌ಐಟಿಯು ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರಕರಣದ ಸಂಬಂಧ ‘ಬಿ’ ರಿಪೋರ್ಟ್‌ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಒಪ್ಪಿಕೊಂಡಿದೆ, ಎಂದರು. ಆ ಅಂಶವನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ…
ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆಯು ಮೇ 20ರಂದು ದೂರು ದಾಖಲಿಸಿದ್ದರು. ದೂರಿನಲ್ಲಿ ಬಿಜೆಪಿ ಕಾರ್ಯಕರ್ತೆಯಾಗಿದ್ದ ತನ್ನ ಮೇಲೆ ಮುನಿರತ್ನ ಅವರು ತಮ್ಮ ಸಹಚರರಿಂದ 2023ರ ಜೂನ್ 11ರಂದು ಸಾಮೂಹಿಕ ಅತ್ಯಾಚಾರ ಮಾಡಿಸಿದ್ದಾರೆ. ಅತ್ಯಾಚಾರದ ನಂತರ ಬಾಯಿಗೆ ಮೂತ್ರ ವಿಸರ್ಜಿಸಿದ್ದಾರೆ ಮತ್ತು ಜೀವನ ಪರ್ಯಂತ ನರಳುವಂತಹ ಅಪಾಯಕಾರಿ ಚುಚ್ಚುಮದ್ದೊಂದನ್ನು ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಸಂತ್ರಸ್ತೆಯು ಒಟ್ಟು ಐವರ ವಿರುದ್ಧ ದೂರು ನೀಡಿದ್ದರು. ಈ ಕ್ರಿಮಿನಲ್‌ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿಸಿ ಮುನಿರತ್ನ ಮತ್ತು ನಂದಿನಿ ಬಡಾವಣೆಯ ವಸಂತ ಕುಮಾರ್‌, ಚನ್ನಕೇಶವ, ಆಶ್ರಯ ನಗರದ ಕಮಲ್‌ ಹಾಗೂ ಅನಾಮಧೇಯ ವ್ಯಕ್ತಿಯೊಬ್ಬನನ್ನು ಹೆಸರಿಸಲಾಗಿತ್ತು. ಆನಂತರ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರವು ಎಸ್‌ಐಟಿ ರಚಿಸಿದ್ದು, ಅದಕ್ಕೆ ಈ ಪ್ರಕರಣವನ್ನು ವರ್ಗಾಯಿಸಲಾಗಿತ್ತು.

ಜೂನ್‌ 5ರಂದು ಬಿ ರಿಪೋರ್ಟ್…
ಶಾಸಕ ಮುನಿರತ್ನ ವಿರುದ್ಧ ಆರ್‌.ಎಂ.ಸಿ.ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಿ ರಿಪೋರ್ಟ್‌ ಸಲ್ಲಿಸಿದೆ. ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಎಸ್‌ಪಿಪಿ ಹೈಕೋರ್ಟ್‌ಗೆ ಈ ವಿಚಾರ ತಿಳಿಸಿದ್ದರು.

ಪ್ರಕರಣ ರದ್ದು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿಯು ನ್ಯಾ.ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತು. ಆಗ ಶಾಸಕ ಮುನಿರತ್ನ ಪರ ವಕೀಲರು, ‘‘ಅರ್ಜಿದಾರರ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿಆರೋಪ ಸಾಬೀತಾಗಿಲ್ಲವೆಂದು ಎಸ್‌ಐಟಿ ವಿಚಾರಣಾ ನ್ಯಾಯಾಲಯಕ್ಕೆ ಈಗಾಗಲೇ ಬಿ ರಿಪೋರ್ಟ್‌ ಸಲ್ಲಿಸಿದೆ,’’ ಎಂದಿದ್ದರು. ಅದಕ್ಕೆ ಉತ್ತರಿಸಿದ ಎಸ್‌ಪಿಪಿ ಪ್ರದೀಪ್‌, ‘‘ಹೌದು ಪ್ರಕರಣದಲ್ಲಿಬಿ ರಿಪೋರ್ಟ್‌ ಸಲ್ಲಿಕೆ ಮಾಡಲಾಗಿದೆ. ಆದರೆ, ಅದನ್ನು ಕೋರ್ಟ್‌ ಇನ್ನೂ ಅಂಗೀಕರಿಸಿಲ್ಲ. ಹಾಗಾಗಿ, ಈಗಲೇ ಯಾವುದೇ ಅದೇಶ ಮಾಡಬಾರದು’ ಎಂದು ಮನವಿ ಮಾಡಿದ್ದರು

Leave a Reply

Your email address will not be published. Required fields are marked *

error: Content is protected !!