ವಿಜಯಪುರ, ಸೆ.19: ಜಿಲ್ಲೆಯ ಚಡಚಣ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಷ್ರದ ಹುಲಜಂತಿ ಗ್ರಾಮದ ಪಾಳು ಬಿದ್ದ ಮನೆಯೊಂದರಲ್ಲಿ ಮೇಲ್ಚಾವಣಿಯಲ್ಲಿ ಬ್ಯಾಗ್ ಪತ್ತೆಯಾಗಿದ್ದು, ಈ ಬ್ಯಾಗ್ನಲ್ಲಿ ಒಟ್ಟು 41.4 ಲಕ್ಷ ರೂ. ನಗದು ಹಾಗೂ 6.54 ಕೆ.ಜಿ. ಚಿನ್ನಾಭರಣ (136 ಬಂಗಾರದ ಪ್ಯಾಕೇಟ್) ಸಿಕ್ಕಿದೆ.
ಮಹಾರಾಷ್ಟ್ರದ ಹುಲಜಂತಿ ಗ್ರಾಮದ ಶೀಟು ಹಾಕಿದ ಪಾಳು ಬಿದ್ದ ಮನೆಯ ಛಾವಣಿಯ ಮೇಲೆ ಚಿನ್ನ ಹಾಗೂ ನಗದು ತುಂಬಿದ ಬ್ಯಾಗ್ ಪತ್ತೆಯಾಗಿದೆ. ಚಡಚಣ ಬ್ಯಾಂಕ್ ದರೋಡೆ ಮಾಡಿದ ಆರೋಪಿಗಳು ಸಾರ್ವಜನಿಕರಿಂದ ತಪ್ಪಿಸಿಕೊಂಡು ಹೋಗುವಾಗ ಈ ಬ್ಯಾಗನ್ನು ಮುಚ್ಚಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಕಳೆದ ಸೆಪ್ಟೆಂಬರ್ 16ರಂದು ಸಂಜೆ ಚಡಚಣದ ಎಸ್ಬಿಐ ಬ್ಯಾಂಕಿಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ಹಾಗೂ ಅಲ್ಲಿದ್ದ ಗ್ರಾಹಕರನ್ನು ಹೆದರಿಸಿ ಸುಮಾರು 1.4 ಕೋಟಿ ರೂ. ನಗದು ಹಾಗೂ 20 ಕೆ.ಜಿ.ಯಷ್ಟಿದ್ದ ಚಿನ್ನವನ್ನು ಲೂಟಿ ಮಾಡಿದ್ದರು.
ದರೋಡೆಕೋರರು ಬಳಸಿದ್ದ ಒಂದು ವಾಹನವನ್ನು ಪೊಲೀಸರು 2.5 ಗಂಟೆಗಳಲ್ಲೇ ಪತ್ತೆಹಚ್ಚಿದ್ದರು. ದರೋಡೆಕೋರನೊಬ್ಬ ಕಾರನ್ನು ಮಹಾರಾಷ್ಟ್ರದ ಮಂಗಳವೇಡೆ ತಾಲೂಕಿನ ಹುಲಜಂತಿ ಗ್ರಾಮದ ಬಳಿ ತೆಗೆದುಕೊಂಡು ಹೋದಾಗ ಸಣ್ಣ ಅಪಘಾತ ಸಂಭವಿಸಿ ಸ್ಥಳೀಯರೊಂದಿಗೆ ಜಗಳವಾಗಿದೆ. ಈ ಸಂದರ್ಭದಲ್ಲಿ ಆ ದರೋಡೆಕೋರ ಪಿಸ್ತೂಲ್ ತೋರಿಸಿ ಹೆದರಿಸಿ ಬ್ಯಾಗನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿತ್ತು.
ಪೊಲೀಸರು ಕಾರು ಜಪ್ತಿ ಮಾಡಿದಾಗ 1.3 ಲಕ್ಷ ನಗದು ಹಾಗೂ 21 ಬಂಗಾರದ ಪ್ಯಾಕೇಟ್ಗಳು ಸಿಕ್ಕಿದ್ದವು. ಅಪರಾಧ ಕೃತ್ಯಕ್ಕೆ ಬಳಸಿದ ವಾಹನಗಳು ಕಳ್ಳತನ ಮಾಡಿದ ವಾಹನಗಳಾಗಿದ್ದು, ನಂಬರ್ ಪ್ಲೇಟ್ ಬದಲಿಸಿ ಈ ಕೃತ್ಯ ನಡೆಸಲಾಗಿದೆ. ಈ ಕುರಿತು ಮಹಾರಾಷ್ಟ್ರ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಈ ಪ್ರಕರಣವನ್ನು ಬೇಧಿಸುವುದಕ್ಕಾಗಿ ವಿಜಯಪುರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ದರೋಡೆಕೋರರ ಬಂಧನಕ್ಕೆ 8 ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದರು.

