ಬೆಂಗಳೂರು: ಇದೇ ತಿಂಗಳ 24ರಂದು “ನ್ಯೂಟನ್ಸ್ 3rd ಲಾ” ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸುಧಾಕರ್ ರೆಡ್ಡಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ, ಯೌವನದ ಉಲ್ಲಾಸ, ಸ್ನೇಹ ಮತ್ತು ರಹಸ್ಯಗಳ ಸಂಯೋಜನೆಯ ಕಥಾಬಿಂಬ ಹೊಂದಿದೆ. ವಿಶು ನಾಯಕನಾಗಿ ಹಾಗೂ ವಿದ್ಯಾಶ್ರೀ ಗೌಡ ನಾಯಕಿಯಾಗಿ ಅಭಿನಯಿಸಿರುವ ಚಿತ್ರದಲ್ಲಿ ವಿಜಯ್ ಚೆಂಡೂರ್, ಅಂಬರೀಶ್ ಸಾರಂಗಿ, ಶ್ರೀನಿಧಿ ಭಟ್, ಅಥರ್ವ, ರೋಹಿತ್, ಸುನಂದಾ ಕಲಬುರ್ಗಿ, ಮೀನಾಕ್ಷಿ ಆತ್ರಿ, ಶ್ವೇತಾ, ಗಂಧರ್ವ ರಾಯರವುತ್ತ, ಮಹೇಶ್ ಬಾಬು, ಸತೀಶ್ ಮತ್ತು ಅರ್ಜುನ್ ಹುಣಸೂರ ಸೇರಿದಂತೆ ಅನೇಕರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿದ್ಯಾಶ್ರೀ ಗೌಡ
ಚಿತ್ರದ ತಂತ್ರಜ್ಞ ಹಿನ್ನಲೆಯೂ ಶಕ್ತಿಯುತವಾಗಿದ್ದು, ನಿರ್ಮಾಪಕರು ಸನ್ ಕ್ರಾಫ್ಟ್, ಛಾಯಾಗ್ರಾಹಕ ಪ್ರವೀಣ ಕುಮಾರ್ ಎಂ.ಪಿ., ಸಂಪಾದಕ ಶಿವರಾಜ್ ಮೇಹು, ಸಂಯೋಜಕಿ ಗೀತಾ ಸೈ ಹಾಗೂ ಗೀತರಚನೆ–ಸಂಗೀತಕ್ಕೆ ಗಂಧರ್ವ ರಾಯರವುತ್ತ ತಮ್ಮ ಪ್ರತಿಭೆ ಹಂಚಿಕೊಂಡಿದ್ದಾರೆ. ಗಾಯಕ ಶ್ರೀರಾಮ್ ಗಂಧರ್ವ ಅವರು ತಮ್ಮ ಧ್ವನಿಯಲ್ಲಿ ಹಾಡು ನೀಡಿದ್ದು ಚಿತ್ರಕ್ಕೆ ವಿಶಿಷ್ಟ ಶ್ರುತಿ ನೀಡಿದೆ.
ಕಥಾಹಂದರದಲ್ಲಿ ನಾಲ್ವರು ಸಾಫ್ಟ್ವೇರ್ ಹುಡುಗರು ಮತ್ತು ಇಬ್ಬರು ಹುಡುಗಿಯರು ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಆಗಿ ತಮ್ಮ ಹಾಲಿಡೇ ಸಮಯವನ್ನು ಕ್ರಿಯೇಟಿವ್ ರೀತಿಯಲ್ಲಿ ಕಳೆಯುವುದನ್ನು ತೋರಿಸಲಾಗಿದೆ. ಪ್ಲಾಸ್ಟಿಕ್ ವಿರೋಧಿ ಪರಿಸರ ಸ್ನೇಹಿ ಕಾರ್ಯದ ಅಂಗವಾಗಿ ಮಡಿಕೇರಿಗೆ ಹೋಗುವ ಈ ತಂಡಕ್ಕೆ ಆಗುವ ಘಟನೆಯೇ ಚಿತ್ರದ ಮೂಲ ರಹಸ್ಯ. ಹೋಮ್ಸ್ಟೇಯಲ್ಲಿ ಪಾರ್ಟಿ ಬಳಿಕ ಬೆಳಿಗ್ಗೆ ಅಪ್ರತೀಕ್ಷಿತವಾಗಿ ಸಾವು ಸಂಭವಿಸುವ ಘಟನೆ ಸಿನಿಮಾಕಥೆಗೆ ಕುತೂಹಲ ತುಂಬುತ್ತದೆ.
ಮಧ್ಯಾಂತರದವರೆಗೂ ಮನರಂಜನಾತ್ಮಕ ಕಾಮಿಡಿಯಾಗಿ ಸಾಗುವ ಕಥೆ, ಬಳಿಕ ಥ್ರಿಲ್ಲರ್ ವಾತಾವರಣಕ್ಕೆ ಬದಲಾಗುತ್ತದೆ. ವಿಜಯ್ ಚೆಂಡೂರ್ ಅವರ ಪಂಚ್ಲೈನ್ ಕಾಮಿಡಿ ಚಿತ್ರದಲ್ಲಿ ನಗು ತರಿಸುವ ಅಂಶವಾಗಿದ್ದು, ಕೊನೆಯಲ್ಲಿ ಹಣಕ್ಕಾಗಿ ಮನುಷ್ಯ ಎಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾನೆ ಎಂಬ ಸಾಮಾಜಿಕ ಸಂದೇಶ ನೀಡುತ್ತದೆ.ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಚಿಂತನೀಯ ವಿಷಯವನ್ನೂ ಕೊಡಲಿರುವ “ನ್ಯೂಟನ್ಸ್ 3rd ಲಾ ” ಚಿತ್ರವು ಅಕ್ಟೋಬರ್ 24ರಂದು ಬಿಡುಗಡೆಯಾಗಿ ಕಣ್ಣಾಮುಚ್ಚಾಲೆಯ ಸಸ್ಪೆನ್ಸ್ ಮತ್ತು ಹೃದಯ ಸ್ಪರ್ಶಿಸುವ ಕಥೆಗೆ ಸಾಕ್ಷಿಯಾಗಲಿದೆ.


