ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮೊನ್ನೆ 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಶನಿವಾರ ಬೆಳಗ್ಗೆ ಮತ್ತೆ 20 ಕೃಷ್ಣಮೃಗಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು
ಮಾಹಿತಿ ನೀಡಿದ್ದಾರೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮೃಗಾಲಯದಲ್ಲಿರುವ ಕೃಷ್ಣಮೃಗಗಳು
ಈ ಸಂಬಂಧ ಡಿ.ಎಫ್.ಒ. ಎನ್.ಇ.ಕ್ರಾಂತಿ ಅವರನ್ನು ಈಟಿವಿ ಭಾರತ ಪ್ರತಿನಿಧಿ ಸಂಪರ್ಕಿಸಿದಾಗ, ”ಬ್ಯಾಕ್ಟಿರಿಯಲ್ ಇನ್ಫೆಕ್ಷನ್ನಿಂದ ಕೃಷ್ಣಮೃಗಗಳು ಮೃತಪಟ್ಟಿವೆ. ಬೆಂಗಳೂರಿನ ಬನ್ನೇರುಘಟ್ಟದ ಪಶು ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರು ಬರುತ್ತಿದ್ದು, ಅವರು ಪರೀಕ್ಷೆ ನಡೆಸಲಿದ್ದಾರೆ. ಮೊನ್ನೆ 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಮತ್ತೆ 20 ಮೃತಪಟ್ಟಿವೆ. ಇದರಿಂದ ಒಟ್ಟು 28 ಜಿಂಕೆಗಳು ಸಾವನ್ನಪ್ಪಿರುವುದು ಆಘಾತಕಾರಿ ಸಂಗತಿ” ಎಂದು ತಿಳಿಸಿದರು.
ತನಿಖೆಗೆ ಸಚಿವ ಖಂಡ್ರೆ ಆದೇಶ
ಕೃಷ್ಣಮೃಗಗಳು ಅಸಹಜವಾಗಿ ಮೃತಪಟ್ಟಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ತನಿಖೆಗೆ ಆದೇಶ ನೀಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಈ ಕೃಷ್ಣಮೃಗಗಳು ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಮೃಗಾಲಯದ ಬೇರೆ ಯಾವುದೇ ಪ್ರಾಣಿಗೆ ಸೋಂಕು ತಗುಲದಂತೆ ಎಲ್ಲ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.
ಈ ಕೃಷ್ಣಮೃಗಗಳು ಕಲುಷಿತ ನೀರು, ಆಹಾರ ಸೇವಿಸಿ ಕಾಯಿಲೆಗೆ ತುತ್ತಾಗಿ ಮೃತಪಟ್ಟಿವೆಯೇ ಅಥವಾ ಬೆಕ್ಕು ಇತ್ಯಾದಿ ಸಾಕು ಪ್ರಾಣಿಗಳಿಂದ ಈ ಕಾಯಿಲೆ ಹರಡಿದೆಯೇ ಎಂಬ ಬಗ್ಗೆ ಒಂದು ತಜ್ಞರ ಸಮಿತಿ ರಚಿಸಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಖಂಡ್ರೆ ಆದೇಶಿಸಿದ್ದಾರೆ.
ಮೃಗಾಲಯದಲ್ಲಿರುವ ಪ್ರಾಣಿಗಳು ಈ ರೀತಿ ಸಾವಿಗೀಡಾಗುವುದು ಆತಂಕದ ವಿಚಾರವಾಗಿದ್ದು, ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವಿದ್ದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಪ್ರತ್ಯೇಕ ಘಟನೆ, ಕಾಡಾನೆಗಳು ಸಾವು:
ನದಿ ದಾಟಲು ಹೋಗಿ ಎರಡು ಕಾಡಾನೆಗಳು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕುನೂರು ಅರಣ್ಯ ಪ್ರದೇಶದಲ್ಲಿ ನಡೆದಿತ್ತು.
ಕುನೂರು ಅರಣ್ಯ ವ್ಯಾಪ್ತಿಯ ಅರ್ಕಾವತಿ ನದಿ ದಾಟುವಾಗ ಕೆಸರಿನ ಕಳೆಗೆ ಸಿಲುಕಿ ಎರಡು ಕಾಡಾನೆಗಳು ಸಾವನ್ನಪ್ಪಿವೆ. ಕಳೆಯಲ್ಲಿ ಸಿಲುಕಿ ಹೊರಬರಲಾಗದೇ ನರಳಾಡಿ ಕಾಡಾನೆಗಳು ಪ್ರಾಣಬಿಟ್ಟಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತಪಟ್ಟ ಕಾಡಾನೆಗಳನ್ನು ಅರಣ್ಯಾಧಿಕಾಗಳು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದರು.
ಅಧಿಕಾರಿಗಳು ಹೇಳಿದ್ದು ಹೀಗೆ: “ರಾತ್ರಿ ವೇಳೆ ಒಟ್ಟು ಆರು ಆನೆಗಳು ಅರ್ಕಾವತಿ ನದಿ ದಾಟುವ ಸಂದರ್ಭದಲ್ಲಿ, ಕೆಸರಿನ ಜೊತೆಗೆ ನದಿಯಲ್ಲಿ ಬೆಳೆದಿರುವ ಕಳೆ (ಜೊಂಡು) ಯಲ್ಲಿ ಸಿಲುಕಿ ಹೊರಬರಲಾಗದೇ ನರಳಾಡಿ 2 ಆನೆಗಳು ಪ್ರಾಣಬಿಟ್ಟಿರುವ ಸಾಧ್ಯತೆ ಇದೆ. ಸ್ಥಳಕ್ಕೆ ವೈದ್ಯರ ತಂಡ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ” ಎಂದು ಡಿಎಫ್ಒ ರಾಮಕೃಷ್ಣಪ್ಪ ಹಾಗೂ ಆರ್ಎಫ್ಒ ಮಲ್ಲೇಶ್ ತಿಳಿಸಿದ್ದರು.

