ಮಂಡ್ಯ: ಜಿಲ್ಲೆಯಲ್ಲಿ ಅಪರಾಧ, ಜೂಜಾಟ, ಐಪಿಎಲ್ ದಂಧೆ ನಿಗ್ರಹ ಮತ್ತು ಮಾದಕ ವಸ್ತು ಸೇವನೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಎಸ್ಪಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಅಪರಾಧ, ಜೂಜಾಟ, ಐಪಿಎಲ್ ದಂಧೆ ನಿಗ್ರಹ ಮತ್ತು ಮಾದಕ ವಸ್ತು ಸೇವನೆ ವಿರುದ್ಧ ಕೆಲ ದಿನಗಳ ಹಿಂದೆ ತಮ್ಮ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಕೆಲ ದಿನಗಳ ಕಾಲ ಕಟ್ಟುನಿಟ್ಟಿನ ಕ್ರಮ ವಹಿಸಿದಂತೆ ತೋರಿದರೂ ಬಳಿಕ ಮತ್ತೆ ಎಲ್ಲ ಕಾನೂನುಬಾಹಿರ ಕೃತ್ಯಗಳು ತಲೆ ಎತ್ತಿವೆ. ಗಾಂಜಾ ಸೇವನೆ ಗ್ರಾಮೀಣ ಭಾಗದಲ್ಲಿ ಪಿಡುಗಾಗಿದೆ. ಐಪಿಎಲ್ ಅಲ್ಲದೇ ವಿವಿಧ ಕ್ರಿಕೆಟ್ ಪಂದ್ಯಾವಳಿಗಳ ಕುರಿತು ನಿತ್ಯ ಬೆಟ್ಟಿಂಗ್ ದಂಧೆ ಸಕ್ರಿಯವಾಗಿದೆ ಎಂದು ಆರೋಪಿಸಿದರು.
ಮಂಗಳಮುಖಿಯರು ಹೆದ್ದಾರಿಗಳಲ್ಲಿ ಲೈಂಗಿಕ ವಿಕೃತಿಗಳ ಮೂಲಕ ಅಪರಾಧ ಕೃತ್ಯಕ್ಕೆ ಕಾರಣರಾಗಿದ್ದಾರೆ. ಇವೆಲ್ಲವನ್ನೂ ಬಲ್ಲ ಗುಪ್ತಚಾರ ಪೊಲೀಸರು, ಬೀಟ್ ಪೊಲೀಸರು ಸಹ ದಂಧೆಕೋರರಿಗೆ ಒತ್ತಾಸೆಯಾಗಿ ನಿಂತಿರುವುದು ಪೊಲೀಸ್ ವ್ಯವಸ್ಥೆಯ ವಿಶ್ವಾಸಾರ್ಹತೆ ಪ್ರಶ್ನಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಬೂದನೂರು ಗ್ರಾಪಂ ವ್ಯಾಪ್ತಿಯಲ್ಲಿ 15 ದಿನದಲ್ಲಿ 2 ಬಾರಿ ಕತ್ತಿ, ಲಾಂಗ್ ಹಿಡಿದು ಹೊಡೆದಾಡಿರುವ ಪ್ರಕರಣದಲ್ಲಿ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ. ಗಲಾಟೆ, ಹೊಡೆದಾಟಗಳಲ್ಲಿ ಆಯುಧಗಳ ಬಳಕೆಯಾದ ಬಗ್ಗೆ ಕಠಿಣ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದರು.
ಸಂಘಟನೆಗಳು ಹೋರಾಟ ನಡೆಸಿ ಬೂದನೂರು ಸುತ್ತಮುತ್ತ ಅಪ್ರಾಪ್ತರಿಗೆ ಹುಕ್ಕಾ ಮಾರಾಟ ದಂಧೆಗೆ ಕಡಿವಾಣ ಹಾಕಲಾಗಿದೆ. ಬೆಟ್ಟಿಂಗ್ ದಂಧೆ, ಇಸ್ಪೀಟ್ ಜೂಜಾಟಕ್ಕೆ ತಡೆ ಮಾಡಿದ ಹಿನ್ನಲೆಯಲ್ಲಿ ದಂಧೆಕೋರರ ಜೊತೆ ಶಾಮೀಲಾಗಿರುವ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಕೆಲ ಪ್ರಕರಣದಲ್ಲಿ ಹೋರಾಟಗಾರರ ಮೇಲೆ ಸುಳ್ಳು ದೂರು ದಾಖಲಿಸಿ ಬೆದರಿಕೆ ತಂತ್ರ ಅನುಸರಿಸುತ್ತಿರುವುದು ಆತಂಕಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಮಾಂತರ ಠಾಣೆಯ ಎಸ್ ಬಿ ಪೇದೆ ಪ್ರಕಾಶ್ ಯರಗಟ್ಟಿ ಹಾಗೂ ಕೆಲ ಸಿಬ್ಬಂದಿ ದಂಧೆಕೋರರ ಜೊತೆ ಸೇರಿ ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣರಾಗಿದ್ದಾರೆ. ಈ ಕೂಡಲೇ ಇಂತಹ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ವಹಿಸಲು ಒತ್ತಾಯಿಸಿದರು.
ಮಂಡ್ಯ ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಕೆಲ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಂದರ್ಶಕರ ಸಹಿ, ಮಾಹಿತಿ ಸಂಗ್ರಹ ಮಾಡಲು ಕ್ರಮ ವಹಿಸಬೇಕು. ದೂರುಗಳು ಸ್ವೀಕೃತವಾದ ಬಳಿಕ ಆರೋಪಿತರ ವಿಚಾರಣೆ ನಡೆಸದೆ, ಸೂಕ್ತ ದಾಖಲೆಗಳಿಲ್ಲದೆ ತಕ್ಷಣ ಎಫ್ ಐ ಆರ್ ದಾಖಲಿಸುವ ಕ್ರಮದ ಬಗ್ಗೆ ಪರಾಮರ್ಶೆ ಮಾಡಲು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬೂದನೂರು ಸತೀಶ್, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣ ಗೌಡ, ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿಗೌಡ, ಕರವೇ ಜಿಲ್ಲಾಧ್ಯಕ ಹೆಚ್. ಡಿ. ಜಯರಾಂ, ದಸಸಂನ ಎಂ. ವಿ. ಕೃಷ್ಣ, ರಾಜುಗೌಡ, ರೈತ ಸಂಘದ ಬೂದನೂರು ಪುಟ್ಟಸ್ವಾಮಿ ಮೊದಲಾದವರಿದ್ದರು.

