Headlines

ದೆಹಲಿಯಲ್ಲಿ ಸಿಎಂ–ಡಿಸಿಎಂ ರಹಸ್ಯ ಮಾತುಕತೆ: ಸಚಿವ ಸಂಪುಟ ಪುನರ್​ ರಚನೆ ಚುರುಕು

ಕಳೆದ ಹಲವು ದಿನಗಳಿಂದ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿವೆ. ಸಚಿವ ಸಂಪುಟ ಪುನರ್​​ರಚನೆಯಾಗಲಿದೆ ಎಂಬ ಚರ್ಚೆಯ ನಡುವೆ ಒಬ್ಬರಾದ ಮೇಲೆ ಒಬ್ಬರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ‌.ಶಿವಕುಮಾರ್ ಅವರುಗಳು ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ರಹಸ್ಯ ಮಾತುಕತೆ ನಡೆಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸ ಕಳೆದ ಎರಡು ದಿನಗಳಿಂದ ರಾಜ್ಯದ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದೆ. ಯಾಕಂದರೆ, ಮೊನ್ನೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಖರ್ಗೆಯವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ನಿನ್ನೆ ಸಿಎಂ ಸಿದ್ದರಾಮಯ್ಯ ಕೂಡ ಎಐಸಿಸಿ ಅಧ್ಯಕ್ಷ ಖರ್ಗೆ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅದರಲ್ಲೂ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆದಿರೋದು ಕುತೂಹಲ ಮೂಡಿಸಿದೆ.

ನಿನ್ನೆ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆಯವರ ಮುಂದೆ ಸಂಪುಟ ಪುನಾರಚನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗಾಗಲೇ ಎರಡು ಸ್ಥಾನ ಖಾಲಿ ಇದೆ. ಇನ್ನೂ 12 ಮಂತ್ರಿ ಸ್ಥಾನ ಖಾಲಿ ಮಾಡಿ 14 ಸ್ಥಾನಗಳೊಂದಿಗೆ ಪುನರ್ ರಚನೆ ಮಾಡೋಣ ಎಂದು ಸಿಎಂ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ ಈ ಪ್ರಸ್ತಾಪಕ್ಕೆ ಖರ್ಗೆ ಯಾವುದೇ ನಿರ್ಧಾರ ತಿಳಿಸಿಲ್ಲ. ಬದಲಿಗೆ ರಾಹುಲ್ ಗಾಂಧಿಯವರ ಜೊತೆಗೆ ಚರ್ಚೆ ನಡೆಸೋದಾಗಿ ಭರವಸೆ ನೀಡಿದ್ದಾರೆ. ಇಷ್ಟೆ ಅಲ್ಲದೆ, ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೂ ಮಾತುಕತೆ ನಡೆಸೋದಾಗಿ ಖರ್ಗೆ ಹೇಳಿದ್ದಾರೆ.

ಹಾಗೇ, ಕಾಂಗ್ರೆಸ್ ನಾಯಕರು ರಾಜ್ಯ ಕಾಂಗ್ರೆಸ್​ನ ಗೊಂದಲಕ್ಕೂ ಮದ್ದು ಅರೆಯುವ ಅಲೋಚನೆಯಲ್ಲಿ ಇದ್ದಾರೆ. ಹೀಗಾಗಿ ಕೆ.ಸಿ. ವೇಣುಗೋಪಾಲ್ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಗೊಂದಲ ಮಾಡಿಕೊಳ್ಳದಂತೆ ಸೂಚಿಸಿದ್ದರು. ಈ ಸೂಚನೆಯ ಪರಿಣಾಮವೆಂಬಂತೆ ನಿನ್ನೆ ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಹಾಗೂ ಡಿಸಿಎಂ ಒಟ್ಟಿಗೆ ಕೂತು ಊಟ ಮಾಡಿದ್ದಾರೆ. ಈ ಮೂಲಕ ತಾವಿಬ್ಬರೂ ಒಟ್ಟಿಗೆ ಇದ್ದೇವೆ ಎಂಬ ಸಂದೇಶ ರವಾನಿಸಲು ಪ್ರಯತ್ನಿಸಿದ್ದಾರೆ.

ಇತ್ತ, ಸಚಿವ ಸಂಪುಟ ಪುನರ್​ರಚನೆ ವಿಚಾರ ಮುನ್ನೆಲೆಗೆ ಬಂದಿದ್ದೇ ತಡ ಶಾಸಕರ ಆಸೆಗೆ ನೀರುಣಿಸಿದಂತಾಗಿದೆ. ಅನೇಕ ಶಾಸಕರು ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದಾರೆ. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಿಎಂ ಜೊತೆಗೆ ದೆಹಲಿಯಲ್ಲಿ ಕಾಣಿಸಿಕೊಂಡು ಮಂತ್ರಿ ಸ್ಥಾನಕ್ಕಾಗಿ ಲಾಬಿ ಶುರು ಮಾಡಿದ್ದಾರೆ. ಮತ್ತೊಂದು ಕಡೆ ಉಳಿದ ಶಾಸಕರು ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಕೇಳುತ್ತಿದ್ದಾರೆ.

ಸದ್ಯಕ್ಕೆ, ಕಾಂಗ್ರೆಸ್ ಹೈಕಮಾಂಡ್ ಸಂಪುಟ ಪುನಾರಚನೆ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಸಿಎಂ ಸಿದ್ದರಾಮಯ್ಯನವರ ಮುಂದೆ ಈ ಬಗ್ಗೆ ಚರ್ಚಿಸಿ ನಿರ್ಧಾರ ಮಾಡೋಣ ಎಂದಷ್ಟೇ‌ ಖರ್ಗೆ ಹೇಳಿ ಭರವಸೆ ಕೊಟ್ಟು ಕಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!