ಕಾಂಗ್ರೆಸ್ ನಲ್ಲಿನ ಕುರ್ಚಿ ಕಿತ್ತಾಟ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಇಂದು ನಡೆಯುವ ಮಹತ್ವದ ಸಭೆಯಲ್ಲಿ ಎಲ್ಲಾ ಗೊಂದಲಗಳಿಗೂ ಇತಿಶ್ರೀ ಬೀಳುವ ಸಾಧ್ಯತೆ ಇದೆ.
ನಿನ್ನೆ ರಾತ್ರಿ ದೆಹಲಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದು, ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿಯ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತ್ಯೇಕ ಸಮಯ ಕೇಳಿದ್ದಾರೆ.ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಿದ್ದರಾಮಯ್ಯನವರು ಖರ್ಗೆಯವರನ್ನು ಭೇಟಿ ಮಾಡುವ ಸಾಧ್ಯತೆಯಿದ್ದು, ಅನಂತರ ಡಿ.ಕೆ.ಶಿವಕುಮಾರ್‌ಅವರು ಖರ್ಗೆ ಅವರ ಮನೆಗೆ ತೆರಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಮುಖಂಡರ ಪ್ರಕಾರ ಇಬ್ಬರು ನಾಯಕರನ್ನು ಮುಖಾಮುಖಿ ಕೋರಿಸಿ ಖರ್ಗೆಯವರು ತಿಳಿ ಹೇಳಲಿದ್ದು ಗೊಂದಲಗಳಾಗದಂತೆ ಪಕ್ಷ ಮತ್ತು ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಲು ಸಲಹೆ ನೀಡಲಿದ್ದಾರೆ ಎನ್ನಲಾಗಿದೆ.
ಅಡ್ಡಗೋಡೆ ಮೇಲೆ ದೀಪ:
ಡಿ.ಕೆ.ಶಿವಕುಮಾರ್ ಅವರು 2023ರ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಮಾತುಕತೆ ಹಾಗೂ ಒಪ್ಪಂದದ ಪ್ರಕಾರ ಎರಡೂವರೆ ವರ್ಷ ಪೂರ್ಣಗೊಂಡಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ತಮದೇ ಆದ ಪ್ರತ್ಯೇಕ ತಂತ್ರಗಾರಿಕೆ ಅನುಸರಿಸುತ್ತಿದ್ದು ಬೆಂಬಲಿಗರ ಮೂಲಕ ಅಲ್ಲಲ್ಲಿ ಔತಣಕೂಟ ನಡೆಸುತ್ತಿದ್ದಾರೆ. ಪ್ರತ್ಯೇಕ ಚರ್ಚೆಗಳಾಗುತ್ತಿವೆ.
ಡಿ.ಕೆ.ಶಿವಕುಮಾರ್ ಬಣದ ಶಾಸಕರು ದೆಹಲಿಗೆ ತೆರಳಿ ವರಿಷ್ಠ ನಾಯಕರನ್ನು ಭೇಟಿ ಮಾಡಿ ಅಧಿಕಾರ ಹಂಚಿಕೆಯ ಸೂತ್ರವನ್ನು ಜಾರಿಗೊಳಿಸುವಂತೆ ಒತ್ತಡ ಹಾಕಿರುವುದರಿಂದಾಗಿ ಸಿದ್ದರಾಮಯ್ಯ ಅವರ ಬಣ ಹೆಚ್ಚು ಸಕ್ರಿಯವಾಗಿದೆ.
ನಿನ್ನೆ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಿ ನಾನು ಯಾವುದೇ ಬಣ ರಾಜಕೀಯವನ್ನು ಬೆಂಬಲಿಸುವುದಿಲ್ಲ. 140 ಮಂದಿ ಶಾಸಕರಿಗೂ ನಾನು ಅಧ್ಯಕ್ಷ ಎಂದಿದ್ದಾರೆ. ಸಂಪುಟ ಪುನರ್ ರಚನೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿರುವುದರಿಂದ ಕೆಲವು ಶಾಸಕರು ವರಿಷ್ಠರ ಮನವೋಲಿಸಿ ಸಚಿವ ಸ್ಥಾನ ಗಿಟ್ಟಿಸಲು ದೆಹಲಿಗೆ ಹೋಗುತ್ತಿದ್ದಾರೆ. ವರಿಷ್ಠರನ್ನು ಭೇಟಿ ಮಾಡಬೇಡಿ ಎಂದು ನಾವು ಯಾರಿಗೂ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಅಧಿಕಾರ ಹಂಚಿಕೆಯ ಬಗ್ಗೆ ಕೆಲವು ಶಾಸಕರು ಹೇಳಿಕೆ ನೀಡಿದಾಗ ಕಠಿಣ ಶಬ್ದಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್ ಪಕ್ಷದ ಶಿಸ್ತು ಸಮಿತಿಯಿಂದ ನೋಟಿಸ್ ಕೂಡ ಕೊಡಿಸಿದ್ದರು. ಆದರೆ, ಈ ಬಾರಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಶಾಸಕರನ್ನು ನಾನು ದೆಹಲಿಗೆ ಕಳಿಸಿಲ್ಲ ಎಂದಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ಯಾರು ಭಾಗವಹಿಸಬಾರದು ಎಂಬ ಖಡಕ್ ಎಚ್ಚರ ಎಚ್ಚರಿಕೆ ನೀಡದೆ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಡಿ.ಕೆ.ಶಿವಕುಮಾರ್ ಬಣದ ಐದಾರು ಶಾಸಕರು ಈಗಾಗಲೇ ದೆಹಲಿ ಪ್ರವಾಸ ಕೈಗೊಂಡು ಮರಳಿದ್ದಾರೆ. ಮತ್ತೆ ಕೆಲವು ಶಾಸಕರು ಇಂದು ಮತ್ತು ನಾಳೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಅದಕ್ಕೆ ಡಿ.ಕೆ.ಶಿವಕುಮಾರ್ ಅವರ ಪರೋಕ್ಷ ಸಮತಿಯೂ ಇದೆ ಎನ್ನಲಾಗುತ್ತಿದೆ.
ಕ್ರಾಂತಿ ಕಿಡಿಯ ಮೂಲ:
ಇತ್ತೀಚಿಗೆ ದೆಹಲಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಮತಗಳ್ಳತನ ವಿಚಾರವಾಗಿ ವ್ಯತಿರಿಕ್ತ ಹೇಳಿಕೆ ನೀಡಿ ಸಚಿವ ಸ್ಥಾನ ಕಳೆದುಕೊಂಡ ಕೆ.ಎನ್.ರಾಜಣ್ಣ ಅವರ ಪರವಾಗಿ ವಕಾಲತ್ತು ವಹಿಸಿದ್ದಾರೆ. ರಾಜಣ್ಣ ಅವರ ಮಾತಿನ ಸ್ಪಷ್ಟ ಅರ್ಥ ಹಾಗೂ ವ್ಯಾಖ್ಯಾನಗಳನ್ನು ಮನವರಿಕೆ ಮಾಡಿಕೊಟ್ಟು ಅನಗತ್ಯವಾಗಿ ರಾಜಣ್ಣ ಅವರನ್ನು ರಾಜಕೀಯಕ್ಕೆ ಬಲಿಪಶು ಮಾಡಲಾಗಿದೆ. ಖಾಲಿ ಇರುವ ಎರಡು ಸ್ಥಾನಗಳಿಗೆ ಸಂಪುಟ ವಿಸ್ತರಣೆ ಮಾಡುವುದಾದರೆ ರಾಜಣ್ಣ ಅವರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳಲು ಅನುಮತಿಸಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದು ಡಿ.ಕೆ.ಶಿವಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ರಾಜಣ್ಣ ಅವರ ಸೇರ್ಪಡೆಗೆ ಸಿದ್ದರಾಮಯ್ಯ ಲಾಬಿ ನಡೆಸುತ್ತಿದ್ದಾರೆ ಎಂಬ ಸುಳಿವು ದೊರೆಯುತ್ತಿದ್ದಂತೆ ಬೆಂಬಲಿಗರು ರೊಚ್ಚಿಗೆದ್ದು ದೆಹಲಿ ಯಾತ್ರೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಸಿದ್ದರಾಮಯ್ಯ ಅವರು ತಮ ಪರಮಾಪ್ತ ರಾಜಣ್ಣ ಅವರನ್ನು ಹೇಗಾದರೂ ಮಾಡಿ ಸಂಪುಟಕ್ಕೆ ಮರಳಿ ಸೇರಿಸಿಕೊಳ್ಳಬೇಕು ಎಂಬ ಉಮೇದಿಗೆ ಬಿದ್ದಿದ್ದಾರೆ. ಇದು ಇಬ್ಬರು ನಾಯಕರ ನಡುವೆ ವೈಮನ್ನಸ್ಸಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.ರಾಜಣ್ಣ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಹಠವನ್ನು ಮುಖ್ಯಮಂತ್ರಿಯವರು ಕೈ ಬಿಟ್ಟರೆ ಡಿಕೆ ಶಿವಕುಮಾರ್ ಬಣ ತಣ್ಣಗಾಗಲಿದೆ ಎಂಬ ಮಾಹಿತಿಯೂ ಇದೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಾಶ್ ಔಟ್ ಮಾಡುತ್ತೇನೆ ಎಂದು ಶಪಥ ಮಾಡಿರುವ ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವುದು ಡಿ.ಕೆ.ಶಿವಕುಮಾರ್ ಬಣಕ್ಕೆ ಅಪಥ್ಯವಾಗಿದ್ದು, ಇದನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.

