Headlines

ಶ್ರೀರಂಗಪಟ್ಟಣ ಪಂಚಾಯತ್ ಇಲಾಖೆಯಲ್ಲಿ ಇ-ಖಾತಾ ತಿದ್ದುಪಡಿಯಲ್ಲಿ ಭಾರಿ ಭ್ರಷ್ಟಾಚಾರದ ಶಂಕೆ!

ಮಂಡ್ಯ/ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಇ-ಖಾತಾ ತಿದ್ದುಪಡಿಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಪ್ರಾಪರ್ಟಿ ದಾಖಲೆ ತಿದ್ದುಪಡಿ ಹೆಸರಿನಲ್ಲಿ ಅನಧಿಕೃತ ವರ್ಗಾವಣೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪಂಚಾಯತ್ ಆಡಳಿತದ ನೌಕರರ ಪಾತ್ರದ ಮೇಲೆ ಗಂಭೀರ ಅನುಮಾನಗಳು ಉದ್ಭವಿಸಿವೆ.

ಗ್ರಾಮ ಪಂಚಾಯಿತಿಯ ಇತ್ತೀಚಿನ ಸಾಮಾನ್ಯ ಸಭೆ ನಡವಳಿಕೆಯಲ್ಲಿ, ಹಿಂದಿನ ತಿಂಗಳಲ್ಲಿ ನಡೆದಿದ್ದ ಕೆಲವು ಇ-ಖಾತಾ ತಿದ್ದುಪಡಿ ಪ್ರಕ್ರಿಯೆಗಳಲ್ಲಿ ಹಳೆ ಸಭಾ ನಿರ್ಣಯಗಳನ್ನು ಸುಳ್ಳಾಗಿ ದಾಖಲಿಸಿಕೊಂಡಿರುವುದು, ಮಾಲೀಕರ ಫೋಟೋ ಬದಲಾವಣೆ, ಪೂರಕ ದಾಖಲೆಗಳಿಲ್ಲದೇ ತಿದ್ದುಪಡಿ ಹಾಗೂ ಎಂಆರ್ (Mutation Register) ಪ್ರಕ್ರಿಯೆ ನಡೆಸದೆ ಖಾತೆ ನಮೂದು ಮಾಡಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಿತ ನೌಕರರಿಗೆ ನೋಟಿಸ್‌ ಜಾರಿಮಾಡುವುದಾಗಿ ಹಾಗೂ ವರದಿಗಳನ್ನು
ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸಲ್ಲಿಸುವುದು ಎಂದು ಸಭಾ ನಡವಳಿಕೆ ಪಟ್ಟಿ ಸೂಚಿಸುತ್ತಿದೆ.

ಸಾಮಾನ್ಯವಾಗಿ ಇ-ಖಾತಾ ತಿದ್ದುಪಡಿ ಸೌಲಭ್ಯವು ಕಂಡುಬರುವ ಸಣ್ಣ ಪ್ರಮಾದಗಳನ್ನು ಸರಿಪಡಿಸುವ ಉದ್ದೇಶದಿಂದ ಸರ್ಕಾರ ನೀಡಿದ್ದಾಗಿದೆ. ಆದರೆ ಇತ್ತೀಚಿನ ಪ್ರಕರಣಗಳಲ್ಲಿ ಮೂಲ ಮಾಲೀಕರ ಹೆಸರು ಸಂಪೂರ್ಣ ಬದಲಾಗಿದ್ದು, ಆಸ್ಥಿಯ ಮಾಲೀಕತ್ವವೇ ಬೇರೆಯವರ ಹೆಸರಿಗೆ ವರ್ಗಾವಣೆ ಆಗಿರುವ ಸಾಧ್ಯತೆ ಮೂಡಿದೆ.

ಇದು ಇ-ಖಾತಾ ವ್ಯವಸ್ಥೆಯ ದುರ್ಬಳಕೆಯ ಸ್ಪಷ್ಟ ಉದಾಹರಣೆ.

ಶ್ರೀರಂಗಪಟ್ಟಣ ತಾಲೂಕಿನಲ್ಲಿ ಒಟ್ಟಾರೆಯಾಗಿ 5075 ಅರ್ಜಿಗಳು ತಿದ್ದುಪಡಿಗಾಗಿ ಸಲ್ಲಿಕೆಯಾಗಿದ್ದು,
ಹುಲಿಕೆರೆ ಗ್ರಾಮ ಪಂಚಾಯಿತಿಯಿಂದ ಈವರೆಗೆ ತಾಲ್ಲೂಕು ಪಂಚಾಯಿತಿಗೆ ಸುಮಾರು 760 ತಿದ್ದುಪಡಿಗಾಗಿ ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ಸರ್ಕಾರಿ ದಾಖಲೆಗಳು ತಿಳಿಸಿವೆ. ಈ ಪ್ರಮಾಣದ ಅರ್ಜಿಗಳು ಕೇವಲ ‘ಕಣ್ತಪ್ಪಿನಲ್ಲಿ ನಡೆದ ತಪ್ಪು ತಿದ್ದುಪಡಿ’ಗಾಗಿ ಎಂದು ಹೇಳುವಷ್ಟರ ಮಟ್ಟಿಗೆ ಸಾಧ್ಯವಿಲ್ಲ.

ಅಧಿಕಾರಿಗಳ ಕೈಚಳಕದಿಂದ ಹಣಕ್ಕಾಗಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಶಂಕೆ ಗಾಢವಾಗಿದೆ.

ಈ ವಿಚಾರವಾಗಿ ಈಗಾಗಲೇ ಶ್ರೀರಂಗಪಟ್ಟಣ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದು. ತಾಲ್ಲೂಕು ಪಂಚಾಯತ್ ಮತ್ತು ಮೇಲಾಧಿಕಾರಿಗಳು ಈ ತಿದ್ದುಪಡಿ ಪ್ರಕ್ರಿಯೆಗಳ ಕುರಿತು, ಪಾರದರ್ಶಕ ತನಿಖೆ ನಡೆಸಬೇಕೆಂದು ನಮ್ಮ ಆಗ್ರಹ.

Leave a Reply

Your email address will not be published. Required fields are marked *

error: Content is protected !!