ದೆಹಲಿಯಲ್ಲಿರುವ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಇನ್ನೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಮೊದಲೇ ಇಂದು ಆತುರದಿಂದ ನಾನೇ ಕರ್ನಾಟಕದಲ್ಲಿ 5 ವರ್ಷ ಸಿಎಂ ಆಗಿರುತ್ತೇನೆ, 2028 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದರೂ ನಾನೇ ಮತ್ತೆ ಸಿಎಂ ಆಗುತ್ತೇನೆ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಕೇವಲ ಕೆಲವು ಶಾಸಕರ ಬೆಂಬಲ ಮಾತ್ರ ಇದೆಯೆಂದು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.
ಇದರಿಂದ ಈವರೆಗೂ ಸಿಎಂ ಆಕಾಂಕ್ಷಿಯೇ ನಾನಲ್ಲ ಎಂದು ಹೇಳುತ್ತಾ ಬಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಯಾವಾಗ ಸಿದ್ದರಾಮಯ್ಯ ನಾನೇ ಸಿಎಂ ಆಗಿ 5 ವರ್ಷಗಳ ಕಾಲ ಮುಂದುವರೆಯುತ್ತೇನೆ ಮತ್ತು 2028 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೂ ನಾನೇ ಸಿಎಂ ಆಗುತ್ತೇನೆ ಎಂದರೊ ಆಗ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಶಾಸಕರ ದಂಡು ರೊಚ್ಚಿಗೆದ್ದಿದೆ.
ಈಗಾಗಲೇ ದೆಹಲಿಯಲ್ಲಿರುವ ಸಚಿವರಾದ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ದೆಹಲಿಯ ಖಾಸಗಿ ಹೋಟೆಲ್ ವೊಂದರಲ್ಲಿ ಸಚಿವರಾದ ಪರಮೇಶ್ವರ್-ಸತೀಶ್ ಜಾರಕಿಹೊಳಿ ಅವರಿಬ್ಬರೂ ಇಂದು ಗುರುವಾರ ಮಧ್ಯಾಹ್ನ ಸತತ ಒಂದು ಗಂಟೆಗೂ ಹೆಚ್ಚಿನ ಕಾಲ ಕರ್ನಾಟಕದ ಮುಂದಿನ ರಾಜಕೀಯದ ಬಗ್ಗೆ ರಹಸ್ಯವಾಗಿ ಗಂಭೀರ ಚರ್ಚೆ ನಡೆಸಿದ್ದಾರೆ.
ಸದ್ಯ ಕರ್ನಾಟಕದ ಮುಂದಿನ ಸಿಎಂ ಪಟ್ಟದ ಆಕಾಂಕ್ಷಿಗಳಾದ ಈ ಇಬ್ಬರು ಸಚಿವರು ದಲಿತ ಸಮುದಾಯದ ಪರವಾಗಿ ಒಬ್ಬ ನಾಯಕ ಸಿಎಂ ಆಗಬೇಕು ಎಂದು ಹೈಕಮಾಂಡ್ ಮುಂದೆ ರಹಸ್ಯವಾಗಿ ಬೇಡಿಕೆ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರ ಬದಲಿಗೆ ಡಿಸಿಎಂ-ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಲ್ಲದೆ ಇದೀಗ ದಲಿತ ಸಮುದಾಯದ ಪರವಾಗಿ ಒಬ್ಬ ನಾಯಕ 1947 ರ ಸ್ವಾತಂತ್ರ್ಯ ನಂತರ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಸಿಎಂ ಆಗಲೇಬೇಕು ಎಂಬ ಬೇಡಿಕೆ ಜೋರಾಗುವ ಸಾಧ್ಯತೆ ನಿಚ್ಚಳವಾಗಿದೆ.

