ವಿಜಯಪುರ, ಜುಲೈ 10: ತಮಿಳುನಾಡಿನ ಕೊಯಮತ್ತೂರಿನಲ್ಲಿ 1998ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ರಾಜ್ಯದ ವಿಜಯಪುರದಲ್ಲಿ ಬಂಧಿಸಲಾಗಿದೆ.
ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಿದ್ದಿಕಿ ರಾಜ್ನನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ. ಸ್ಫೋಟ ಬಳಿಕ ತಮಿಳುನಾಡಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದಿಕಿರಾಜ್ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿಕೊಂಡಿದ್ದನು. ಕೊನೆಗೆ ವಿಜಯಪುರ ನಗರದಲ್ಲಿ ಗುಪ್ತವಾಗಿ ಠಿಕಾಣಿ ಹೂಡಿದ್ದನು.
ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವನಾದ ಸಿದ್ದಿಕಿರಾಜ್ 1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಆರೋಪಿ ಸಿದ್ದಿಕಿ ರಾಜ್ಹುಬ್ಬಳ್ಳಿ ಮೂಲದ ಮಹಿಳೆಯೊಂದಿಗೆ ವಿವಾಹವಾಗಿದ್ದಾನೆ. ಸರಣಿ ಸ್ಫೋಟ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದಿಕಿರಾಜ್ ಕಳೆದ 12 ವರ್ಷಗಳಿಂದ ವಿಜಯಪುರದಲ್ಲಿ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದನು.
ಈತನಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿ ಸಿದ್ದಿಕಿರಾಜ್ ವಿಜಯಪುರದಲ್ಲಿ ಅಡಗಿರುವುದು ಗೊತ್ತಾಗಿದೆ. ಕೂಡಲೇ ವಿಜಯಪುರಕ್ಕೆ ಬಂದ ಪೊಲೀಸರು, ಆರೋಪಿ ಸಿದ್ದಿಕಿರಾಜ್ನನ್ನು ಪತ್ತೆ ಮಾಡಿ, ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಆರೋಪಿ ಸಿದ್ದಿಕಿರಾಜ್ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಬಂಧಿತ ಆರೋಪಿ ವಿರುದ್ಧ ಕೋಮುಗಲಭೆ, ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳಿವೆ.
ಸಾಧಿಕ್ ಬಂಧನದ ಮೂಲಕ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ 3ನೇ ಪ್ರಮುಖ ಆರೋಪಿ ಸೆರೆಯಾದಂತಾಗಿದೆ. ಕೆಲವು ವಾರಗಳ ಹಿಂದೆಯಷ್ಟೇ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳಾದ ಅಬುಬಕರ್ ಸಿದ್ದಿಕ್ ಮತ್ತು ಮೊಹಮ್ಮದ್ ಅಲಿ ಆಲಿಯಾಸ್ ಯೂನಸ್ನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿತ್ತು.
1998ರ ಫೆಬ್ರವರಿ 14 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿದ್ದವು. ಸ್ಫೋಟದಲ್ಲಿ 59 ಜನರು ಮೃತಪಟ್ಟಿದ್ದು, ಸುಮಾರು 231 ಜನರು ಗಾಯಗೊಂಡಿದ್ದರು. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

