Headlines

ಡ್ರಗ್ಸ್ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಗೃಹ ಸಚಿವರ ಖಡಕ್ ಸೂಚನೆ

ಬೆಂಗಳೂರು: ರಾಜಧಾನಿಯಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ಕರ್ತವ್ಯ ಲೋಪ ಎಸಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್

​”ನೂರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಂಡರೆ ಸಾಲದು. ವ್ಯವಸ್ಥಿತವಾಗಿ ನಡೆಯುತ್ತಿರುವ ಇಂತಹ ದಂಧೆಗಳನ್ನು ಬೇರುಸಹಿತ ಕಿತ್ತೆಸೆಯಬೇಕು. ಇನ್ನು ಮುಂದೆ ಪ್ರತಿಯೊಂದು ವಿಚಾರವನ್ನೂ ಗಂಭೀರವಾಗಿ ಪರಿಗಣಿಸದಿದ್ದರೆ ನಾನು ಸುಮ್ಮನಿರುವುದಿಲ್ಲ. ಯಾವುದೇ ಪ್ರಭಾವಿಗಳ ಶಿಫಾರಸುಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ,” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೌಲ್ಯದ ಕುರಿತು ಸ್ಪಷ್ಟನೆ

​ನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಪತ್ತೆಯಾದ ಡ್ರಗ್ಸ್ ಮೌಲ್ಯದ ಬಗ್ಗೆ ಹರಿದಾಡುತ್ತಿರುವ ವರದಿಗಳಿಗೆ ಸಚಿವರು ಸ್ಪಷ್ಟನೆ ನೀಡಿದರು. “ಸಿಕ್ಕಿರುವ ಡ್ರಗ್ಸ್ ಮೌಲ್ಯ 58 ಕೋಟಿ ರೂ. ಅಲ್ಲ. ಮಾರುಕಟ್ಟೆ ದರದಂತೆ ಒಂದು ಕೆ.ಜಿ.ಗೆ 30 ಲಕ್ಷ ರೂ. ಬೆಲೆಯಾಗುತ್ತದೆ. ಅಂದಾಜು 4 ಕೆ.ಜಿ. ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ 1.20 ಕೋಟಿ ರೂ. ಆಗುತ್ತದೆ. ಅಲ್ಲದೆ, ನಗರದ ಮೂರು ಕಡೆ ಫ್ಯಾಕ್ಟರಿಗಳಿದ್ದವು ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದೆ,” ಎಂದು ಅವರು ಸ್ಪಷ್ಟಪಡಿಸಿದರು.

ಜಂಟಿ ಕಾರ್ಯಾಚರಣೆಯ ಸಮರ್ಥನೆ

​ಮುಂಬೈ ಪೊಲೀಸರ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಸಚಿವರು, “ಮಹಾನಗರಗಳಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಕಾರ್ಯಾಚರಣೆ ನಡೆಯುತ್ತಿದೆ. ಶನಿವಾರ ಮುಂಬೈ ಪೊಲೀಸರು, ಬೆಂಗಳೂರು ನಗರ ಪೊಲೀಸರು, ಎನ್‌ಸಿಬಿ ಮತ್ತು ಸೋಕೋ ತಂಡಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಡ್ರಗ್ಸ್ ತಯಾರಿಕೆಗೆ ಬಳಸುವ ‘ಮೆಫೆಡ್ರಿನ್’ ಎಂಬ ರಾಸಾಯನಿಕ ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ಬಂಧಿಸಲಾಗಿದೆ. ನಮ್ಮ ಪೊಲೀಸರು ಮಾಹಿತಿ ನೀಡಿ ಬೇರೆ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದಾಗ, ಅಲ್ಲಿನ ಪೊಲೀಸರ ವೈಫಲ್ಯ ಎನ್ನಲು ಸಾಧ್ಯವಿಲ್ಲ. ಸಮನ್ವಯದ ಮೂಲಕವೇ ಇಂತಹ ಜಾಲಗಳನ್ನು ಭೇದಿಸಲು ಸಾಧ್ಯ,” ಎಂದರು.

ಈ ಪ್ರಮುಖ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್‌ ಆಯುಕ್ತರಾದ ರಮೇಶ್ ಬಾನೋತ್, ವಂಶಿಕೃಷ್ಣ, ಸಿಸಿಬಿ ಜಂಟಿ ಆಯುಕ್ತ ಅಜಯ್ ಹಿಲೋರಿ ಸೇರಿದಂತೆ ಎಲ್ಲಾ ವಿಭಾಗಗಳ ಡಿಸಿಪಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!