ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮೈಸೂರು ಜಿಲ್ಲೆಯ ಜವಾಬ್ದಾರಿ ನೀಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಮಂಡ್ಯದಲ್ಲಿ ‘ಜನಸ್ನೇಹಿ ಪೊಲೀಸ್’ ಪರಿಕಲ್ಪನೆಯನ್ನು ಜಾರಿಗೆ ತಂದು ಮೆಚ್ಚುಗೆ ಗಳಿಸಿದ್ದ ಬಾಲದಂಡಿ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ, ಸದ್ಯ ಬಳ್ಳಾರಿ ಎಸ್ಪಿಯಾಗಿರುವ ಶೋಭಾರಾಣಿ ವಿ.ಜೆ. ಅವರನ್ನು ನೇಮಕ ಮಾಡಲಾಗಿದೆ.
ನೂತನ ಎಸ್ಪಿಯಾಗಿ ಬರಲಿರುವ ಶೋಭಾರಾಣಿ ಅವರು 2016ರ ಬ್ಯಾಚ್‌ನ ಅಧಿಕಾರಿಯಾಗಿದ್ದು, ಮಂಡ್ಯ ಜಿಲ್ಲೆಯ ಭೌಗೋಳಿಕ ಮತ್ತು ಅಪರಾಧ ಹಿನ್ನೆಲೆಯ ಬಗ್ಗೆ ಮೊದಲೇ ಅರಿವು ಹೊಂದಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಡಿವೈಎಸ್ಪಿ ಮತ್ತು ಹೆಚ್ಚುವರಿ ಎಸ್ಪಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ.

ವರ್ಗಾವಣೆಗೊಂಡಿರುವ ಮಲ್ಲಿಕಾರ್ಜುನ ಬಾಲದಂಡಿ ಅವರು ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ರೌಡಿಸಂ ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ರೌಡಿಗಳ ಗಡೀಪಾರು, ಅಪರಾಧ ತಡೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಇವರು ನಡೆಸಿದ ಜಾಗೃತಿ ಅಭಿಯಾನಗಳು ಸಾರ್ವಜನಿಕರ ಗಮನ ಸೆಳೆದಿದ್ದವು. 2024ರ ಜುಲೈನಲ್ಲಿ ಮಂಡ್ಯಕ್ಕೆ ಬಂದಿದ್ದ ಇವರು, ಈಗ ನೆರೆಯ ಮೈಸೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿದ್ದಾರೆ.

