ವರದಿ : ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಖಾಕಿ ಅಂಗಿಯ ಅಹಂಕಾರ ಹಾಗೂ ಕೈಬಿಸಿ ಮಾಡುವ ಚಾಳಿ ಕೊನೆಗೂ ಒಬ್ಬ ಮುಖ್ಯ ಪೇದೆಯ ಕೆಲಸಕ್ಕೆ ಕುತ್ತು ತಂದಿದೆ! ಬಡ ಸವಾರನಿಗೆ ಕಿರುಕುಳ ನೀಡಿ, ಲಂಚಕ್ಕಾಗಿ ಆಮಿಷವೊಡ್ಡಿದ ಆರೋಪದ ಮೇಲೆ ಚಾಮರಾಜನಗರ ನಗರ ಸಂಚಾರ ಠಾಣೆಯ ಮುಖ್ಯ ಪೇದೆ ಮಲ್ಲು ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಏನಿದು ಘಟನೆ?
ಸಂಚಾರ ನಿಯಮ ಉಲ್ಲಂಘನೆ ಹೆಸರಲ್ಲಿ ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲು ಮಲ್ಲು ಅವರು ಸವಾರನ ಬಳಿ ಹಣದ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. “ಗಾಡಿ ಬೇಕಂದ್ರೆ ಕೈ ಬಿಸಿ ಮಾಡಲೇಬೇಕು” ಎಂಬ ಧೋರಣೆ ತೋರಿದ್ದ ಪೇದೆಯ ವರ್ತನೆಯಿಂದ ಬೇಸತ್ತ ಸವಾರ, ನೇರವಾಗಿ ಲೋಕಾಯುಕ್ತ ಬಾಗಿಲು ತಟ್ಟಿದ್ದರು.
ಲೋಕಾಯುಕ್ತ ಖೆಡ್ಡಾ!
ಶುಕ್ರವಾರ ಸಂಜೆ ಚಾಮರಾಜನಗರದ ಸಂಚಾರ ಠಾಣೆಯ ಮೇಲೆ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿದಾಗ, ಲಂಚದ ಹಗರಣದ ಕರಾಳ ಮುಖ ಬಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಮಲ್ಲು ಅವರು ಕರ್ತವ್ಯ ಲೋಪ ಎಸಗಿರುವುದು ಮತ್ತು ಭ್ರಷ್ಟಾಚಾರದ ಹಾದಿ ಹಿಡಿದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ.
ಎಸ್ಪಿಯ ಖಡಕ್ ಆ್ಯಕ್ಷನ್
ಲೋಕಾಯುಕ್ತ ದಾಳಿಯ ಬೆನ್ನಲ್ಲೇ ಎಚ್ಚೆತ್ತ ಎಸ್ಪಿ ಎಂ. ಮುತ್ತುರಾಜು ಅವರು, ಇಲಾಖೆಯ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಮಲ್ಲು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿದ್ದಾರೆ. “ಭ್ರಷ್ಟಾಚಾರ ಸಹಿಸುವುದಿಲ್ಲ” ಎಂಬ ಖಡಕ್ ಸಂದೇಶವನ್ನು ಈ ಮೂಲಕ ಇಡೀ ಜಿಲ್ಲಾ ಪೊಲೀಸ್ ಇಲಾಖೆಗೆ ರವಾನಿಸಿದ್ದಾರೆ.
”ಸಾರ್ವಜನಿಕರ ಸೇವಕನಾಗಬೇಕಿದ್ದ ಪೇದೆ, ಹಣದ ಆಸೆಗೆ ಬಿದ್ದು ಈಗ ಅಮಾನತಿನ ಶಿಕ್ಷೆ ಅನುಭವಿಸುವಂತಾಗಿದೆ. ಖಾಕಿ ಪಡೆಯ ಗೌರವಕ್ಕೆ ಚ್ಯುತಿ ತರುವವರಿಗೆ ಇದೊಂದು ಪಾಠ!”

