ಬೆಂಗಳೂರು, ಜುಲೈ 12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿ 2025ನೇ ವರ್ಷದ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಈ ದುರಂತದ ತನಿಖಾ ವರದಿ ಬಹಿರಂಗವಾಗಿದೆ. ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ತನಿಖಾ ವರದಿಯಲ್ಲಿ ಸ್ಫೋಟಕ ಅಂಶಗಳು ಬಯಲಾಗಿವೆ. ಕಾಲ್ತುಳಿತ ದುರಂತಕ್ಕೆ ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ಕಾರಣ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಗೆ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ಈ ಸಂಭ್ರಮ ದುರಂತವಾಗಿ ಮಾರ್ಪಟ್ಟಿತ್ತು. ಲಕ್ಷಾಂತರ ಆರ್‌ಸಿಬಿ ಅಭಿಮಾನಿಗಳು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿ 11 ಜನ ಆರ್.ಸಿ.ಬಿ ಅಭಿಮಾನಿಗಳು ದಾರುಣವಾಗಿ ಪ್ರಾಣ ಬಿಟ್ಟಿದ್ದರು. ಅಲ್ಲದೆ 47ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಈ ಕಾಲ್ತುಳಿತದ ದುರಂತದ ಕಾರಣಗಳನ್ನು ಕಂಡುಹಿಡಿಯಲು ಜಿಲ್ಲಾಧಿಕಾರಿಗಳ ತನಿಖೆ, ಸಿಐಡಿ ತನಿಖೆ ಮತ್ತು ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದ ಏಕಸದಸ್ಯ ಸಮಿತಿಯನ್ನು ರಾಜ್ಯಸರಕಾರ ರಚಿಸಿತ್ತು. ಇದಾಗಿ ಒಂದು ತಿಂಗಳಲ್ಲಿ ನಿವೃತ್ತ ನ್ಯಾಯಾಧೀಶರಾದ ಮೈಕಲ್ ಡಿ.ಕುನ್ಹಾ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನಿನ್ನೆ ಶುಕ್ರವಾರ ವಿಧಾನಸೌಧದ ಸಿಎಂ ಕಚೇರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರು ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. 2 ಸಂಪುಟಗಳಲ್ಲಿ, ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆಯಾಗಿದ್ದು, ಕಾಲ್ತುಳಿತ ದುರಂತಕ್ಕೆ ಕಾರಣ ಏನು? ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಕಾಲ್ತುಳಿತಕ್ಕೆ ಕೆಎಸ್ ಸಿಎ, ಡಿಎನ್‌ಎ, ಆರ್‌ಸಿಬಿ ಹಾಗೂ ಪೊಲೀಸರು ನೇರ ಹೊಣೆ.
ಕಾರ್ಯಕ್ರಮ ನಡೆಸುವುದು ಅಸಾಧ್ಯವೆಂದು ಗೊತ್ತಿದ್ದರೂ ಎಲ್ಲರೂ ಶಾಮೀಲಾಗಿ ಕಾರ್ಯಕ್ರಮ ನಡೆಸಿದರು.
ಈ ಎಲ್ಲರ ಕರ್ತವ್ಯಲೋಪ, ನಿರ್ಲಕ್ಷ್ಯತನದ ಪರಮಾವಧಿ ಎದ್ದು ಕಾಣುತ್ತಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ.
ಕ್ರೀಡಾಂಗಣದ ಒಳಗೆ 79 ಮಂದಿ ಪೊಲೀಸರು ಮಾತ್ರ ಇದ್ದರು.
ಹೊರಗೆ ಪೊಲೀಸರು ಇರಲಿಲ್ಲ. ಆಂಬ್ಯುಲೆನ್ಸ್ ಇರಲಿಲ್ಲ.
3.25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ 5.30 ರವರೆಗೆ ಪೊಲೀಸ್ ಕಮಿಷನರ್ಗೆ ಮಾಹಿತಿ ಇರಲಿಲ್ಲ.
ಜಂಟಿ ಪೊಲೀಸ್ ಅಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದು 4 ಗಂಟೆಗೆ.
ಹೀಗೆ ಸಾಲು ಸಾಲು ಲೋಪಗಳನ್ನು ನ್ಯಾ.ಕುನ್ಹಾ ತಮ್ಮ ವರದಿಯಲ್ಲಿ ಪಟ್ಟಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡಿದ್ದಾರೆ. ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ಮತ್ತು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬಹುದು ಮತ್ತು ಪ್ರಕರಣ ದಾಖಲು ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ವರದಿ ರಾಜ್ಯಸರ್ಕಾರದ ಕೈ ಸೇರಿದೆ, ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇಟ್ಟು ಚರ್ಚೆ ನಡೆಸಲಾಗುತ್ತೆ. ಈ ಮಧ್ಯೆ ರಾಜ್ಯ ಪೊಲೀಸ್ ಇಲಾಖೆಯು ಜನಸಂದಣಿ ನಿರ್ವಹಣೆಗಾಗಿ ಹೊಸ ಎಸ್‌ಒಪಿ ರೂಪಿಸಿದೆ. ಇದೇ ವೇಳೆ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದೆ.
ಅಂತೂ ಇಂತೂ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಮರಣಮೃದಂಗದ ಬಗ್ಗೆ ನ್ಯಾ. ಮೈಕಲ್ ಡಿ. ಕುನ್ಹಾ ತನಿಖಾ ವರದಿಗಳ ಶಿಫಾರಸುಗಳು ಎಷ್ಟು ಪರಿಣಾಮಕಾರಿಯಾಗಿರುತ್ತವೆ? ಎಂಬುದನ್ನು ಇನ್ನೂ ಕಾದು ನೋಡಬೇಕು. ಜಸ್ಟಿಸ್ ಮೈಕಲ್ ಡಿ. ಕುನ್ಹಾ ಸಮಿತಿಯ ಶಿಫಾರಸುಗಳು ಭವಿಷ್ಯದ ದುರಂತಗಳನ್ನು ತಡೆಯುವಲ್ಲಿ ಯಶಸ್ವಿಯಾಗುತ್ತವೆಯೇ? ಎಂಬ ಬಗ್ಗೆ ಜುಲೈ 17ರ ಸಚಿವ ಸಂಪುಟದ ಸಭೆ ನಂತರ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.

