Headlines

ತಿರುಪತಿಗೆ ತುಮುಲ್ ನಿಂದ ನಂದಿನಿ ತುಪ್ಪ ರವಾನೆ

ತುಮಕೂರು, ಜುಲೈ 16: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗಾಗಿ ತುಮಕೂರು ಹಾಲು ಒಕ್ಕೂಟದಿಂದ ಟಿಟಿಡಿ ದೇವಾಲಯಕ್ಕೆ(ತಿರುಮಲದ ತಿರುಪತಿ ತಿಮ್ಮಪ್ಪ ದೇವಾಲಯ) ನಂದಿನಿ ತುಪ್ಪ ಕೊಂಡೊಯ್ಯುವ ಟ್ಯಾಂಕರ್‌ ವಾಹನಕ್ಕೆ ತುಮುಲ್‌ ಅಧ್ಯಕ್ಷ ಹಾಗೂ ಶಾಸಕ ಹೆಚ್‌.ವಿ.ವೆಂಕಟೇಶ್‌ ಚಾಲನೆ ನೀಡಿದರು.

ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೇರವಾಗಿ ತುಪ್ಪ ಪೂರೈಸುವ ಅವಕಾಶವನ್ನು ಕೆಎಂಎಫ್‌ ತನ್ನ ವ್ಯಾಪ್ತಿಯ ಹಾಲು ಒಕ್ಕೂಟಗಳಿಗೆ ಕಲ್ಪಿಸಿರುವುದರಿಂದ ತುಪ್ಪವನ್ನು ಟ್ಯಾಂಕರ್‌ ಮೂಲಕ ಟಿಟಿಡಿಗೆ ಪೂರೈಸುವ ಕಾರ್ಯವನ್ನು ತುಮುಲ್‌ ಆರಂಭಿಸಿದೆ.

ಟಿಟಿಡಿಗೆ ತುಪ್ಪ ಕೊಂಡೊಯ್ಯುವ ಟ್ಯಾಂಕರ್‌ ವಾಹನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ತುಮುಲ್‌ ಅಧ್ಯಕ್ಷ ಹಾಗೂ ಶಾಸಕ ಹೆಚ್‌.ವಿ.ವೆಂಕಟೇಶ್‌ ಅವರು, ತುಮಕೂರು ಹಾಲು ಒಕ್ಕೂಟದಲ್ಲಿ ಪ್ರಸ್ತುತ ಪ್ರತಿದಿನ 10 ಲಕ್ಷದ 50 ಸಾವಿರ ಲೀಟರ್‌ ನಂದಿನಿ ಹಾಲು ದಾಖಲೆ ಪ್ರಮಾಣದಲ್ಲಿ ಶೇಖರಣೆಯಾಗುತ್ತಿದೆ ಎಂದರು.

ಪ್ರತಿದಿನ ಶೇಖರಣೆಯಾಗುತ್ತಿರುವ ಹಾಲಿನ ಪೈಕಿ ಬೆಂಗಳೂರಿಗೆ 1.95 ಲಕ್ಷ ಲೀಟರ್‌ ಹಾಲು ಹಾಗೂ ತುಮಕೂರಿನಲ್ಲಿ 1.20 ಲಕ್ಷ ಲೀಟರ್‌ ನಂದಿನಿ ಹಾಲು ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಕೇರಳದಲ್ಲಿ ಸರಾಸರಿ 50 ರಿಂದ 60 ಸಾವಿರ ಲೀಟರ್‌ ನಂದಿನಿ ಹಾಲು ಹಾಗೂ ಬಾಂಬೆಯಲ್ಲಿ 1 ಲಕ್ಷ ಲೀಟರ್‌ ನಂದಿನಿ ಹಾಲು ಮಾರಾಟವಾಗುತ್ತಿದೆ ಎಂದು ಹೇಳಿದರು.

ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕ್ಷೀರಭಾಗ್ಯ ಯೋಜನೆಯಡಿ ಪ್ರತಿದಿನ ಶಾಲಾ ಮಕ್ಕಳಿಗೆ ಕುಡಿಯಲು ಹಾಲು ವಿತರಿಸುವ ಸಲುವಾಗಿ 80 ಸಾವಿರ ಲೀಟರ್‌ ನಂದಿನಿ ಹಾಲು ವಿನಿಯೋಗಿಸಲಾಗುತ್ತಿದೆ. ನಮ ಒಕ್ಕೂಟದ 80 ಸಾವಿರ ಲೀಟರ್ ನಂದಿನಿ ಹಾಲನ್ನು ಪೌಡರ್‌ ಮಾಡಿ ಶಾಲಾಮಕ್ಕಳ ಕ್ಷೀರಭಾಗ್ಯ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ತುಮುಲ್‌ ನಿರ್ದೇಶಕರಾದ ಡಿ. ಕೃಷ್ಣಕುಮಾರ್‌, ಮಹಾಲಿಂಗಪ್ಪ, ಎಂ.ಕೆ. ಪ್ರಕಾಶ್‌, ಭಾರತಿ ಶ್ರೀನಿವಾಸ್‌‍, ಚಿ.ನಾ.ಹಳ್ಳಿಯ ಪ್ರಕಾಶ್‌, ನಂಜೇಗೌಡ, ನಾಗೇಶ್‌ಬಾಬು, ಸಿದ್ದಲಿಂಗಯ್ಯ, ಚಂದ್ರಶೇಖರರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌‍ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!