Headlines

ಸಣ್ಣ ವ್ಯಾಪಾರಿಗಳಿಗೆ GST ಗೊಂದಲಕ್ಕೆ ಕೇಂದ್ರವೇ ಹೊಣೆ: ಸಿಎಂ

ಬೆಂಗಳೂರು, ಜುಲೈ 20: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌‍ಟಿ ತೆರಿಗೆಯ ನೋಟಿಸ್‌‍ ನೀಡಿರುವ ಸಂಬಂಧ ಪಟ್ಟಂತೆ ರಾಜ್ಯಸರ್ಕಾರ ಯಾವುದೇ ಜವಾಬ್ದಾರಿ ಹೊಂದಿಲ್ಲ . ಕೇಂದ್ರಸರ್ಕಾರವೇ ಹೊಣೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ವರದಿಗಾರರೊಂದಿಗೆ ಮಾತನಾಡಿರುವ ಅವರು, ಜಿಎಸ್‌‍ಟಿ ಕಾಯ್ದೆ ಮಾಡಿರುವುದು ಕೇಂದ್ರ ಸರ್ಕಾರ. ಜಿಎಸ್‌‍ಟಿ ಕೌನ್ಸಿಲ್‌ ಕೂಡ ರಾಜ್ಯ ಸರ್ಕಾರದ ಅಧೀನದಲ್ಲಿ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ಹೊಣೆಗಾರಿಕೆ ಹೊಂದಿದೆ ಎಂದರು.

ರಾಜ್ಯಸರ್ಕಾರದಿಂದ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಲು ಯಾವುದಾದರೂ ಅವಕಾಶಗಳು ಇದ್ದರೆ ಅದರ ಬಗ್ಗೆ ರಾಜ್ಯಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರದ ಜೊತೆಗೂ ಈ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು.

ಡಿ.ಕೆ.ಶಿವಕುಮಾರ್‌ ರವರಿಗೆ ಅಪಮಾನ ಮಾಡಿಲ್ಲ: ಸಿಎಂ ಸಮಜಾಯಿಷಿ

ಇದೇ ವೇಳೆ ನಿನ್ನೆ ಮೈಸೂರಿನಲ್ಲಿ ನಡೆದ ಸಾಧನ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಅಪಮಾನ ಮಾಡಿಲ್ಲ. ಬಿಜೆಪಿ ಈ ವಿಚಾರವನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಸಿಎಂ ಸಮಜಾಯಿಷಿ ನೀಡಿದರು.

“ಡಿ.ಕೆ. ಶಿವಕುಮಾರ್‌ ಅವರು ಕಾರ್ಯಕ್ರಮದಲ್ಲಿ ಇರಲಿಲ್ಲ. ಹಾಗಾಗಿ ಅವರ ಹೆಸರನ್ನು ಕರೆಯಲಿಲ್ಲ. ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದೆ. ಯಾರು ಇರುತ್ತಾರೋ ಅವರ ಹೆಸರನ್ನು ಕರೆಯುವುದು ರೂಢಿ ಎಂದು ತಮ್ಮನ್ನು ಸಮರ್ಥಿಸಿಕೊಂಡರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಇದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿ, ನಾನು ಅಲ್ಲಿ ಇರಲೇ ಇಲ್ಲ ಎಂದು ಸಿಎಂಗೆ ಅವರಿಗೆ ಬೆಂಬಲ ಸೂಚಿಸಿದರು. ಬಳಿಕ ಮಾತು ಮುಂದುವರೆಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಮಿಬ್ಬರ ನಡುವೆ ಒಡಕು ಮೂಡಿಸಿ, ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಅದು ಯಶಸ್ವಿಯಾಗುವುದಿಲ್ಲ. ಬಿಜೆಪಿ ಅವರು ಯಾವಾಗಲೂ ಭ್ರಮೆಯಲ್ಲೇ ಇರುತ್ತಾರೆ ಎಂದರು.
ಆಗ ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹ ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *

error: Content is protected !!