ಬೆಂಗಳೂರು, ಜುಲೈ 20: 8 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್‌ನಲ್ಲಿ ಇಲ್ಲಿಯವರೆಗೆ ಬ್ಯಾಟಿಂಗ್‌ನಲ್ಲಿ ಯಶಸ್ಸಾಗದೆ ವಿಫಲವಾಗಿದ್ದಾರೆ. ಈ ನಡುವೆ ಕರುಣ್ ನಾಯರ್ ದೇಶೀ ಟೂರ್ನಿಯಲ್ಲಿ ವಿದರ್ಭ ತಂಡವನ್ನು ರಣಜಿ ಚಾಂಪಿಯನ್ ಮಾಡಿದ ನಂತರ ಮತ್ತೆ ತಮ್ಮ ತವರು ಕರ್ನಾಟಕ ತಂಡವನ್ನು ಸೇರಿಕೊಂಡಿದ್ದಾರೆ. ಕಳೆದ ಎರಡು ದೇಶೀ ಆವೃತ್ತಿಯಲ್ಲಿ ವಿದರ್ಭ ತಂಡದ ಪರ ಆಡಿದ್ದ ಕರುಣ್ ನಾಯರ್ ಬಹಳ ಅದ್ಭುತ ಬ್ಯಾಟಿಂಗ್ ಮಾಡಿ ಜೊತೆಗೆ ನಾಯಕನಾಗಿ ಯಶಸ್ಸು ಕಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ ಕರುಣ್ ನಾಯರ್ ಕೇವಲ 131 ರನ್ ಗಳಿಸಿದ್ದಾರೆ. ಇದರ ಹೊರತಾಗಿಯೂ, ಕರ್ನಾಟಕ ತಂಡ 2025-26ರ ದೇಶೀಯ ಸೀಸನ್ಗಾಗಿ ಕರುಣ್ ಅವರನ್ನು ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
ಕರ್ನಾಟಕ ಪರ ಆಡಲಿರುವ ಕರುಣ್..!
ಕಳೆದ ಎರಡು ದೇಶೀಯ ಸೀಸನ್ಗಳಲ್ಲಿ ವಿದರ್ಭ ಪರ ಆಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ತಮ್ಮ ಹಳೆಯ ತಂಡ ಕರ್ನಾಟಕಕ್ಕೆ ಮತ್ತೆ ಸೇರ್ಪಡೆಗೊಂಡಿದ್ದಾರೆ. ಈ ಸೀಸನ್‌ನಲ್ಲಿ ಅವರು ಕರ್ನಾಟಕ ಪರ ಆಡಲಿದ್ದಾರೆ. 2022 ರಲ್ಲಿ ಕರ್ನಾಟಕ ತಂಡದಿಂದ ಕೈಬಿಟ್ಟ ನಂತರ, ಕರುಣ್ ನಾಯರ್ ವಿದರ್ಭಕ್ಕೆ ತೆರಳಿ 2023 ಮತ್ತು 2024 ರ ದೇಶೀಯ ಆವೃತ್ತಿಗಳಲ್ಲಿ ವಿದರ್ಭ ಪರ ಆಡಿದ್ದರು. ಒಂದೆಡೆ ಕರುಣ್ ಕರ್ನಾಟಕ ತಂಡಕ್ಕೆ ಮರಳುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕದ ವೇಗದ ಬೌಲರ್ ವಾಸುಕಿ ಕೌಶಿಕ್ ಈಗ ಮುಂದಿನ ಸೀಸನ್‌ನಲ್ಲಿ ಗೋವಾ ಪರ ಆಡಲಿದ್ದಾರೆ.
NOC ಕೇಳಿದ ವಾಸುಕಿ ಕೌಶಿಕ್
ಕ್ರಿಕ್‌ಬಜ್ ವರದಿಗಳ ಪ್ರಕಾರ, ಕರುಣ್ ನಾಯರ್ ವೈಯಕ್ತಿಕ ಕಾರಣಗಳಿಂದ ಕರ್ನಾಟಕಕ್ಕೆ ಮರಳಲು ನಿರ್ಧರಿಸಿದ್ದು, ತಂಡವನ್ನು ಸಹ ಸೇರಿಕೊಂಡಿದ್ದಾರೆ. ಹಾಗೆಯೇ ಕರ್ನಾಟಕದ ವೇಗದ ಬೌಲರ್ ವಾಸುಕಿ ಕೌಶಿಕ್ ಗೋವಾ ಪರ ಆಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ (ಕೆಎಸ್‌ಸಿಎ) ಎನ್‌ಒಸಿ ಕೋರಿದ್ದಾರೆ ಎಂದು ವರದಿಯಾಗಿದೆ.
ಗೋವಾ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಕಾರ್ಯದರ್ಶಿ ಶಂಭ ದೇಸಾಯಿ ಮಾತನಾಡಿ, ನಾವು ಕೌಶಿಕ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈಗ ಅವರು ನಮ್ಮ ತಂಡಕ್ಕಾಗಿ ಆಡುವುದನ್ನು ಕಾಣಬಹುದು. ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಗೋವಾ ತಂಡಕ್ಕಾಗಿ ಆಡುವುದನ್ನು ಕಾಣಬಹುದು.
ಕರುಣ್ ನಾಯರ್ ಕಳೆದ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ರಣಜಿ ಟ್ರೋಫಿಯಲ್ಲಿ 863 ರನ್ ಬಾರಿಸಿದ್ದ ಕರುಣ್, ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 779 ರನ್ ಸಿಡಿಸಿದ್ದರು. ಇನ್ನು 32 ವರ್ಷದ ವೇಗದ ಬೌಲರ್ ವಾಸುಕಿ ಕೌಶಿಕ್ ಪ್ರಥಮ ದರ್ಜೆ, ಲಿಸ್ಟ್ ಎ ಮತ್ತು ಟಿ20 ಯಲ್ಲಿ ಕ್ರಮವಾಗಿ 93, 82 ಮತ್ತು 48 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ಸೀಸನ್ವರೆಗೆ, ಅವರು ಕರ್ನಾಟಕದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು.

