Headlines

ಎಐಸಿಸಿ ಓಬಿಸಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ: ಕರ್ನಾಟಕಕ್ಕೆ ಬದಲಿ ಸಿಎಂ ಆಯ್ಕೆಗೆ ಮುನ್ನುಡಿ?

ನವದೆಹಲಿ, ಜುಲೈ 6: ಕರ್ನಾಟಕದ ಸಿಎಂ ಸಿದ್ದರಾಮಯ್ಯನವರನ್ನು ಏಕಾಏಕಿ ಎಐಸಿಸಿ ಓಬಿಸಿ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ ಕ್ರಾಂತಿ ಹಾಗೂ ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಸಿಎಂ ಸಿದ್ದರಾಮಯ್ಯರನ್ನು ಎಐಸಿಸಿ ಓಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿರುವ ಕಾಂಗ್ರೆಸ್ ಹೈಕಮಾಂಡ್ ನಡೆ ತೀವ್ರ ಕುತೂಹಲ ಮೂಡಿಸಿದೆ.

ಸಿಎಂ ಸಿದ್ದರಾಮಯ್ಯರಿಗೆ ಈ ಹೇಳಿಕೆಯೇ ಮುಳುವಾಯ್ತಾ?
ರಾಜ್ಯದಲ್ಲಿ 5 ವರ್ಷ ನಾನೇ ಸಿಎಂ ಎಂಬ ಸಂದೇಶ ನೀಡಿದ್ದ ಸಿದ್ದರಾಮಯ್ಯ ಅವರು ಸಿಎಂ ಹುದ್ದೆ ತೊರೆದು ರಾಷ್ಟ್ರ ರಾಜಕಾರಣಕ್ಕೆ ತೆರಳಲಿದ್ದಾರೆಯೇ? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಸದ್ಯ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯರನ್ನ ನೇಮಕ ಮಾಡಲಾಗಿದೆ. ಓಬಿಸಿ ಸಲಹಾ ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ನಿರ್ಧರಿಸಿದ್ದು, ಇದಕ್ಕಾಗಿ ಇದೇ ಜುಲೈ 15ರಂದು ಬೆಂಗಳೂರಿನಲ್ಲಿ ಮೊದಲ ಸಭೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿನ ಭಾರತ್ ಜೋಡೊ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಈ ಪೈಕಿ ಕಾಂಗ್ರೆಸ್ ನ ಐವರು ಮಾಜಿ ಸಿಎಂಗಳು, 10 ಮಂದಿ ಕೇಂದ್ರದ ಮಾಜಿ ಸಚಿವರೂ ಸಹ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಸಿದ್ದರಾಮಯ್ಯನವರಿಗೆ ಇದು ಗೊತ್ತೇ ಇಲ್ಲ!!!
ಎಐಸಿಸಿ ಒಬಿಸಿ ಸಲಹಾ ಮಂಡಳಿಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಸಿಎಂ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ತಮ್ಮ ನೇಮಕದ ಬಗ್ಗೆ ನನಗೇ ಗೊತ್ತಿಲ್ಲ, ಎಐಸಿಸಿಯವರ ಜೊತೆ ಮಾತಾಡುತ್ತೇನೆ. ಜುಲೈ 15ರಂದು ಕರ್ನಾಟಕದಲ್ಲಿ ಒಂದು ಸಭೆ ಮಾಡಿ ಎಂದು ನನಗೆ ಹೇಳಿದ್ದರು. ಆದರೆ ಓಬಿಸಿ ಸಂಚಾಲಕರನ್ನಾಗಿ ಮಾಡಿದ್ದಾರೋ? ಚೇರ್ಮನ್ ಮಾಡಿದ್ದಾರೋ? ಗೊತ್ತಿಲ್ಲ, ಈ ಕುರಿತು ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಒಬಿಸಿ ಚೇರ್ಮನ್ ಹುದ್ದೆಯನ್ನು ನಾನು ಕೇಳಿಲ್ಲ, ಅವರು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡುತ್ತೇನೆ. ರಾಷ್ಟ್ರ ರಾಜಕಾರಣ ಅಲ್ಲ, ಏನು ಅಂತಾ ಘೋಷಣೆ ಮಾಡಿದ್ದಾರೆ ಗೊತ್ತಿಲ್ಲ ಎಂದರು.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿದ್ದ ಚರ್ಚೆ ಮಧ್ಯೆ 5 ವರ್ಷ ನಾನೇ ಸಿಎಂ ಎಂಬ ಸಂದೇಶ ನೀಡಿದ್ದ ಸಿದ್ದರಾಮಯ್ಯ ಅವರು ಸಿಎಂ ಹುದ್ದೆ ತೊರೆದು ರಾಷ್ಟ್ರ ರಾಜಕಾರಣಕ್ಕೆ ತೆರಳಲಿದ್ದಾರೆಯೇ? ಎನ್ನುವ ಪ್ರಶ್ನೆಯೂ ಮೂಡಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಮಾಸ್ ಲೀಡರ್. ಅಹಿಂದ ನಾಯಕ ಎಂದೇ ಕರೆಸಿಕೊಳ್ಳುವವರಲ್ಲಿ ಸಿದ್ದರಾಮಯ್ಯ ಮೊದಲಿಗರಾಗಿದ್ದು, ಅಪಾರ ಅಭಿಮಾನಿಗಳನ್ನು, ಜನಪ್ರಿಯತೆ ಹೊಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರ ವರ್ಚಸ್ಸನ್ನು ಕರ್ನಾಟಕದಿಂದ ದೇಶದಾದ್ಯಂತ ವಿಸ್ತರಿಸಲು ಕೈ ಹೈಕಮಾಂಡ್​ ಈ ಪ್ಲ್ಯಾನ್ ಮಾಡಿರುವ ಸಾಧ್ಯತೆಗಳಿವೆ.

ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಏನು?
ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಸ್ತಿತ್ವಕ್ಕೆ ತಂದಿರುವ ಹಿಂದೆ ಬಹುದೊಡ್ಡ ತಂತ್ರಗಾರಿಕೆ ಇದೆ. ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶದಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್‌ ಈ ತಂತ್ರ ರೂಪಿಸಿದೆ ಎನ್ನಲಾಗಿದೆ. ಹಿಂದುಳಿದ ವರ್ಗದ ಬಹುದೊಡ್ಡ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು
ಎಐಸಿಸಿ, ಸಿದ್ದರಾಮಯ್ಯನವರನ್ನು ಮುಂದೆ ಬಿಟ್ಟು ಈ ಪ್ಲ್ಯಾನ್ ಮಾಡಿದೆ. ಕಳೆದ ಹಲವಾರು ಸಭೆಗಳಲ್ಲಿ ಓಬಿಸಿ ವರ್ಗವನ್ನು ಭದ್ರಗೊಳಿಸುವ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದರು. ಕಳೆದ ಎರಡು CWC ಸಭೆಗಳಲ್ಲಿ ಓಬಿಸಿ ವರ್ಗದ ಬಗ್ಗೆ ರಾಹುಲ್ ಪ್ರತಿಪಾದಿಸಿಸುತ್ತಾ ಬಂದಿದ್ದರು. ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಭಾಗ ಹಿಂದುಳಿದ ವರ್ಗಗಳಿಗೆ ಸೇರಿದೆ. ಹೀಗಾಗಿ ಹಿಂದುಳಿದ ವರ್ಗಕ್ಕೆ ಹೆಚ್ಚಿನ ನಾಯಕತ್ವ ನೀಡುವ ಬಗ್ಗೆ ಐ
ಎಐಸಿಸಿ ನಾಯಕರು ಆಲೋಚನೆ ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ ಓಬಿಸಿ ಸಲಹಾ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.

ಓಬಿಸಿ ಸಲಹಾ ಮಂಡಳಿ ಮೂಲಕ ದೇಶದ ಅರ್ಧದಷ್ಟು ಸಂಖ್ಯೆಯ ವರ್ಗವನ್ನು ಕಾಂಗ್ರೆಸ್ ಹಿಡಿದಿಟ್ಟುಕೊಳ್ಳುವುದು ಕಾಂಗ್ರೆಸ್ ನ ತಂತ್ರವಾಗಿದ್ದು, ಇದಕ್ಕೆ ಕರ್ನಾಟಕ ಅಹಿಂದ ನಾಯಕ ಎಂದೇ ಜನಪ್ರಸಿದ್ಧಿ ಪಡೆದುಕೊಂಡಿರುವ ಸಿದ್ದರಾಮಯ್ಯನವರ ಅನುಭವವನ್ನು ಬಳಸಿಕೊಳ್ಳುವ ಚಿಂತನೆ ನಡೆಸಿದೆ. ಇದರಿಂದ ಸಿದ್ದರಾಮಯ್ಯನವರಿಗೆ ಓಬಿಸಿ ಸಲಹಾ ಮಂಡಳಿ ನೇತೃತ್ವ ವಹಿಸಿದ್ದು, ಕರ್ನಾಟಕದಿಂದಲೇ ಆರಂಭಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.

ಆದ್ರೆ, ಇನ್ನೊಂದೆಡೆ ಕರ್ನಾಟಕ ಕಾಂಗ್ರೆಸ್​​ ನಲ್ಲಿ ಸಂಚಲನ ಮೂಡಿಸಿದ್ದರೆ, ಸಿದ್ದರಾಮಯ್ಯನವರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಓಬಿಸಿ ಸಲಹಾ ಸಮಿತಿ ಮೂಲಕ ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯುತ್ತಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿವೆ.

ಒಟ್ಟಿನಲ್ಲಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗಿನ ನಡುವೆಯೇ ಸಿದ್ದರಾಮಯ್ಯನವರಿಗೆ ದೊಡ್ಡ ರಾಷ್ಟ್ರಮಟ್ಟದ ಹುದ್ದೆ ನೀಡಿರುವುದು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಸಿದ್ದರಾಮಯ್ಯನವರಿಗೆ ಮಾಹಿತಿ ನೀಡದೇ ಎಐಸಿಸಿ ಈ ನೇಮಕ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!