ಬೆಂಗಳೂರು, ಜುಲೈ 24: ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ದಿವ್ಯಾಂಶಿಯ ಚಿನ್ನಾಭರಣ ಕಳ್ಳತನವಾಗಿರುವ ಆರೋಪ ಕೇಳಿಬಂದಿದೆ. ಶವಾಗಾರದೊಳಗೆ ಮೃತದೇಹ ಕೊಂಡೊಯ್ಯುವಾಗ ಮಗಳ ಕಿವಿಯೋಲೆ, ಚಿನ್ನದ ಸರ ಇತ್ತು. ಆದ್ರೆ, ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ಆಭರಣ ಕಾಣೆಯಾಗಿತ್ತು ಎಂದು ದಿವ್ಯಾಂಶಿ ತಾಯಿ ಅಶ್ವಿನಿ ಆರೋಪಿಸಿ ಬೌರಿಂಗ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶವಾಗಾರದೊಳಗೆ ಮೃತದೇಹ ಕೊಂಡೊಯ್ಯುವಾಗ ಆಭರಣ ಇತ್ತು. ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ಆಭರಣ ಕಾಣೆಯಾಗಿತ್ತು. ನನ್ನ ಮಗಳ ಆಭರಣದೊಂದಿಗೆ ಭಾವನಾತ್ಮಕ ಸಂಬಂಧವಿದೆ. ಸುಮಾರು ಒಂದು ಲಕ್ಷ ಮೌಲ್ಯದ ಕಿವಿ ಓಲೆ, ಸರ ಕಳವು ಆಗಿದೆ. ಘಟನೆ ಸಂಬಂಧ ಕಾನೂನು ಕ್ರಮ ಕೈಗೊಳ್ಳಿ ಎಂದು ಅಶ್ವಿನಿ ದೂರು ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಮಗಳ ಶವ ಹಸ್ತಾಂತರಿಸಿದ್ದರು. ಮಗಳು ಧರಿಸಿದ 6 ಗ್ರಾಂ ತೂಕದ ಕಿವಿಯೋಲೆ ಹಾಗೂ 5 ರಿಂದ 6 ಗ್ರಾಂ ತೂಕದ ಚಿನ್ನದ ಸರ ನೀಡಿಲ್ಲ. ಈ ಬಗ್ಗೆ ಬೌರಿಂಗ್ ಆಸ್ಪತ್ರೆಗೆ ತೆರಳಿ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಶವ ಪರೀಕ್ಷೆ ವೇಳೆ ಯಾರೋ ಚಿನ್ನಾಭರಣ ಕಳ್ಳತನ ಮಾಡಿದ್ಧಾರೆ ಎಂದು ಅಶ್ವಿನಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್ಸಿಬಿ) ತಂಡವು ಐಪಿಎಲ್ ಪಂದ್ಯಾವಳಿಯಲ್ಲಿ ಫೈನಲ್ನಲ್ಲಿ ವಿಜಯ ಸಾಧಿಸಿ ಚೊಚ್ಚಲ ಬಾರಿಗೆ ಕಪ್ ತನ್ನದಾಗಿಸಿಕೊಂಡಿತ್ತು. ಈ ಸಂಭ್ರಮಾಚರಣೆ ಆಚರಿಸಲು ಕಳೆದ ಜೂನ್ 4ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಲಕ್ಷಾಂತರ ಅಭಿಮಾನಿಗಳು ಜಮಾವಣೆಗೊಂಡಿದ್ದರು. ದುರದೃಷ್ಟವಶಾತ್ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು.ಯಲಹಂಕದ ಕಟ್ಟಿಗೇನಹಳ್ಳಿ ನಿವಾಸಿಯಾಗಿದ್ದ 13 ವರ್ಷದ ದಿವ್ಯಾಂಶಿ ಸಾವನ್ನಪ್ಪಿದ್ದಳು. ಬಳಿಕ ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿತ್ತು. ಶವಪರೀಕ್ಷೆ ನಡೆಯುವಾಗ ಚಿನ್ನಾಭರಣವಿರಲಿಲ್ಲ. ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ನೀಡದೆ ಯಾರೋ ಕಳವು ಮಾಡಿದ್ದಾರೆ ಎಂದು ಅಶ್ವಿನಿ ಆರೋಪಿಸಿದ್ಧಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ತಾಯಿ ಅಶ್ವಿನಿ, ಮರಣೋತ್ತರ ಪರೀಕ್ಷೆಯ ಬಳಿಕ ಮಗಳ ಕಿವಿಯೋಲೆ ನಾಪತ್ತೆಯಾಗಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು ಕೊಟ್ಟಿದ್ದೇನೆ .ದಿವ್ಯಾಂಶಿಕಾ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆಯ ಮಾವ ಓಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಓಲೆಯ ಮೇಲೆ ಆಕೆಗೆ ತುಂಬಾ ಅಟ್ಯಾಚ್ಮೆಂಟ್ ಇತ್ತು. ಹಾಗಾಗಿ ಅದು ನನಗೆ ಬೇಕು ಎಂದು ಕೇಳಿದ್ದೇನೆ ಎಂದರು
ಮಗಳು ತುಂಬಾ ಆಸೆ ಪಟ್ಟು ಅದನ್ನು ಹಾಕಿಕೊಂಡಿದ್ದಳು. ಒಂದೂವರೆ ವರ್ಷದಿಂದ ಕಿವಿ ಓಲೆ ಬಿಚ್ಚಿರಲಿಲ್ಲ. ಹಾಗಾಗಿ ಅದು ನನಗೆ ಬೇಕು ಎಂದು ಕೇಳಿದ್ದೇನೆ. ಆಸ್ಪತ್ರೆಯಿಂದ ಯಾರು ಸರಿಯಾಗಿ ಪ್ರತಿಕ್ರಿಯೆ ನೀಡದ್ದಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

