ಬೆಂಗಳೂರು, ಜುಲೈ 27: ಕರ್ನಾಟಕ ಹಾಲು ಮಹಾ ಮಂಡಳಿ (ಕೆ.ಎಂ.ಎಫ್) ಅಧ್ಯಕ್ಷರಾಗಿದ್ದ ಭೀಮಾ ನಾಯ್ಕ್ ಅವರ ಅಧಿಕಾರದ ಅವಧಿ ಮುಗಿದ ಮೇಲೆ ಹೊಸ ಕೆಎಂಎಫ್ ಅಧ್ಯಕ್ಷರ ಆಯ್ಕೆಗಾಗಿ ಕಾಂಗ್ರೆಸ್ ಪಕ್ಷದಲ್ಲೇ ಭಾರಿ ಪೈಪೋಟಿ ನಡೆಯುತ್ತಿದೆ.
ಈಗಾಗಲೇ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಡಿ.ಕೆ ಸುರೇಶ್ ಅವರನ್ನು ನೇಮಿಸಬೇಕೆಂದು ಡಿಸಿಎಂ ತಥಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಲಾಬಿ ಎಐಸಿಸಿ ಮಟ್ಟದಲ್ಲಿ ನಡೆಸುತ್ತಿದ್ದಾರೆ.
ಆದರೆ ಇದೀಗ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಾಲು ಒಕ್ಕೂಟದ (ರಾ.ಬ.ಕೊ.ವಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಾಘವೇಂದ್ರ ಹಿಟ್ನಾಳ್ ಅವರು ಸಿಎಂ ಸಿದ್ದರಾಮಯ್ಯ ಬೆಂಬಲಿಗರೆಂಬ ಹಣೆಪಟ್ಟಿಯೊಂದಿಗೆ ಕೆಎಂಎಫ್ ಅಧ್ಯಕ್ಷರಾಗಲು ಲಾಬಿ ಆರಂಭಿಸಿದ್ದಾರೆ. ಒಂದು ಮೂಲದ ಪ್ರಕಾರ ಡಿ.ಕೆ ಸುರೇಶ್ ಅವರಿಗೆ ರಾಬಕೊವಿ ಅಧ್ಯಕ್ಷರಾದ ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರೇ ಪ್ರಬಲ ಸ್ಪರ್ಧಿಯಾಗಿದ್ದಾರೆ.
ಈ ನಡುವೆ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರು ಕೆಎಂಎಫ್ ಅಧ್ಯಕ್ಷರಾಗಲು ಸತತ 2ನೇ ಬಾರಿ ಕಣದಲ್ಲಿ ಉಳಿದಿದ್ದಾರೆ.
ಕಳೆದ ಬಾರಿಯ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಣದಲ್ಕಿದ್ದ ನನಗೆ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ಮನವೊಲಿಸಿ ಮುಂದಿನ ಬಾರಿ ನಿಮಗೆ ಬೆಂಬಲಿಸಿ ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದರು. ಅದರಂತೆ ಈಗ ನನಗೆ ಕೆಎಂಎಫ್ ಅಧ್ಯಕ್ಷನಾಗಲು ಡಿ.ಕೆ ಸುರೇಶ್ ಬೆಂಬಲ ನೀಡಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾರನ್ನು ಆಯ್ಕೆ ಮಾಡಲಿದೆ? ಎಂಬ ಪ್ರಶ್ನೆ ಹೈಕಮಾಂಡ್ ಅನ್ನು ಕಾಡಿದೆ.
ಆದಾಗ್ಯೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮುಗಿದ ನಂತರ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಆದರೆ ಇದೀಗ ಡಿ.ಕೆ ಸುರೇಶ್, ರಾಘವೇಂದ್ರ ಹಿಟ್ನಾಳ್ ಮತ್ತು ಕೆ.ವೈ.ನಂಜೇಗೌಡ ಈ ಮೂವರ ಪೈಕಿ ಯಾರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ತಲೆನೋವು ಎಐಸಿಸಿ ಮಟ್ಟದಲ್ಲಿ ಚರ್ಚೆಯಾಗುವ ಸಾಧ್ಯತೆ ಗೋಚರಿಸುತ್ತಿದೆ.

