Headlines

ಈಡೇರಿತು 3 ದಶಕಗಳ ಬೇಡಿಕೆ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್!

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಳೆದ 3 ದಶಕಗಳಿಂದ ಈ ಯೋಜನೆಗಾಗಿ ನಡೆಯುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇದೀಗ ಯೋಜನೆಗೆ ಎದುರಾಗಿದ್ದ ಅನೇಕ ವಿಘ್ನಗಳು ನಿವಾರಣೆಯಾಗಿ, ಕೊನೆಗೂ ಕೇಂದ್ರ ಸರಕಾರ ಈ ಯೋಜನೆಗೆ ಗ್ರೀನ್​​ಸಿಗ್ನಲ್ ನೀಡಿದೆ. ಇದರಿಂದಾಗಿ ಕರಾವಳಿ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಗೆ ರೈಲ್ವೆ ಸಂಪರ್ಕ ಸಿಗಲಿದೆ.

ಬಯಲುಸೀಮೆ ಹಾಗೂ ಕರಾವಳಿ ಸಂಪರ್ಕಿಸಿ ವಾಣಿಜ್ಯ ವಹಿವಾಟು ವೃದ್ಧಿಸುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಹಲವಾರು ಬಾರಿ ಅಡ್ಡಿ ಆತಂಕಗಳು ಎದುರಾಗಿದ್ದವು. ಅದರಲ್ಲೂ ವಿಶೇಷವಾಗಿ ಈ ರೈಲು ಮಾರ್ಗ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ನಡುವಿನಿಂದ ಹೋಗುವುದರಿಂದ ಅಲ್ಲಿನ ಸಾಕಷ್ಟು ಪ್ರಮಾಣದ ಮರಗಳ ಹನನವಾಗುತ್ತೆ ಅಂತ ಪರಿಸರವಾದಿಗಳು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದರು. ಈ ಯೋಜನೆಗೆ 1999ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅವರು ಶಂಕುಸ್ಥಾಪನೆ ಮಾಡಿದ್ದರು.

ಕಾಮಗಾರಿ ಆರಂಭವಾಗಿ ಹುಬ್ಬಳ್ಳಿಯಿಂದ ಕಲಘಟಗಿವರೆಗೆ ಸುಮಾರು 34 ಕಿ.ಮೀ ಮಾರ್ಗವನ್ನು ಕೂಡ ನಿರ್ಮಿಸಲಾಗಿತ್ತು. ಆದರೆ ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಈ ಯೋಜನೆ ನಿಂತು ಹೋಗಿತ್ತು. ಕೊನೆಗೆ ಸುಪ್ರಿಂ ಕೋರ್ಟ್​ನಲ್ಲಿಯೂ ವಿಚಾರಣೆ ನಡೆದು, ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಅಚ್ಚರಿಯ ಸಂಗತಿ ಅಂದರೆ ಆ ವೇಳೆಯಲ್ಲಿ ಈ ಯೋಜನೆಗೆ 494 ಕೋಟಿ ರೂಪಾಯಿ ವೆಚ್ಚವಾಗುತ್ತೆ ಎಂದು ಅಂದಾಜಿಸಲಾಗಿತ್ತು.

ಆದರೆ, ಈಗ 17 ಸಾವಿರ ಕೋಟಿ ರೂ. ದಾಟಿದೆ. ಇತ್ತೀಚಿಗಷ್ಟೇ ನೈರುತ್ಯ ರೈಲ್ವೆಯು 17,147 ಕೋಟಿ ರೂಪಾಯಿ ವೆಚ್ಚದ ಪರಿಷ್ಕೃತ ವಿಸ್ತ್ರತ ವರದಿ(ಡಿಪಿಆರ್)ಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿತ್ತು. ಹಲವು ವಿರೋಧ, ವಿವಾದಗಳ ನಡುವೆಯೇ ಈ ಬೃಹತ್‌ ಮೊತ್ತದ ಯೋಜನೆಗೆ ಕೇಂದ್ರ ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಅನ್ನೋ ಕುತೂಹಲವೂ ಮೂಡಿತ್ತು. ಆದರೆ, ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಅನುಮತಿ ನೀಡಿದರು.

ಈಗಿರುವ ಹೊಸಪೇಟೆ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಜೋಡಿ ಮಾರ್ಗ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಮೊದಲು 595 ಹೆಕ್ಟೇ‌ರ್ ಅರಣ್ಯ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು, ಪರಿಷ್ಕೃತ ವರದಿಯಲ್ಲಿ 10 ಹೆಕ್ಟೇರ್‌ನಷ್ಟು ಕಡಿಮೆಗೊಳಿಸಲಾಗಿತ್ತು. 164.4 ಕಿ.ಮೀ ಅಂತರದ ಈ ಮಾರ್ಗದಲ್ಲಿ 97 ಕಿ.ಮೀ. ಮಾರ್ಗ ಅರಣ್ಯದಲ್ಲಿದೆ. ಅದರಲ್ಲಿಯೂ 46.57 ಕಿ.ಮೀ. ಅಂತರದಲ್ಲಿ 57 ಸುರಂಗ ನಿರ್ಮಿಸಬೇಕಾಗುತ್ತದೆ ಎಂದು ಡಿಪಿಆರ್‌ನಲ್ಲಿದೆ. ಸುರಂಗಕ್ಕಾಗಿ ಯಲ್ಲಾಪುರ-ಸುಂಕಸಾಳವರೆಗಿನ 55 ಕಿ.ಮೀ. ದೂರದ ಘಟ್ಟ ಪ್ರದೇಶದಲ್ಲಿ ಬೆಟ್ಟವನ್ನು ಕೊರೆಯಬೇಕಾಗುತ್ತದೆ. ಈ ವೇಳೆ ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶ ಹಾಗೂ ಹೊಂಡಗಳು ಬರುತ್ತಿದ್ದು, ಒಟ್ಟು 13.89 ಕಿ.ಮೀ ಮೇಲ್ಸೇತುವೆ ನಿರ್ಮಿಸಬೇಕಾಗುತ್ತದೆ ಎಂದು ಡಿಪಿಆರ್​ನಲ್ಲಿ ಪ್ರಸ್ತಾಪಿಸಲಾಗಿದೆ.

ಹುಬ್ಬಳ್ಳಿ-ಯಲ್ಲಾಪುರ ನಡುವೆ 75 ಕಿ.ಮೀ. ಬಯಲು ಪ್ರದೇಶ, ಸುಂಕಸಾಳದಿಂದ ಅಂಕೋಲಾವರೆಗೆ ಗುಡ್ಡಗಾಡು ಪ್ರದೇಶ ಇದೆ ಎಂದು ತಿಳಿಸಲಾಗಿದೆ. ಯೋಜನೆಗೆ ಒಟ್ಟು 995 ಹೆಕ್ಟೇ‌ರ್ ಭೂಮಿ ಬೇಕಾಗುತ್ತದೆ. ಇದರಲ್ಲಿ 585 ಹೆಕ್ಟೇ‌ರ್ ಅರಣ್ಯ, 184 ಹೆಕ್ಟೇ‌ರ್ ನೀರಾವರಿ ಭೂಮಿ ಹಾಗೂ 185 ಹೆಕ್ಟೇರ್ ಒಣಭೂಮಿ, 1.40 ಹೆಕ್ಟೇರ್ ನಗರ ಪ್ರದೇಶ ಒಳಗೊಳ್ಳಲಿದೆ. ಇದೀಗ ಎಲ್ಲ ವಿವಾದಗಳನ್ನು ಪರಿಹರಿಸಿಕೊಂಡು ಈ ಯೋಜನೆ ಜಾರಿಗೆ ಸಿದ್ಧವಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರಕ್ಕೆ ಪಕ್ಷಾತೀತವಾಗಿ ಹರ್ಷ ವ್ಯಕ್ತವಾಗಿದೆ.

ಒಂದು ವೇಳೆ ಈ ರೈಲ್ವೆ ಮಾರ್ಗ ಶುರುವಾದರೆ, ಇದರ ಮೂಲಕ ಕಲ್ಲಿದ್ದಲು, ಕಬ್ಬಿಣದ ಅದಿರು, ಆಹಾರ ಧಾನ್ಯ ಮೊದಲಾದ ಸರಕು ಸಾಗಿಸಬಹುದಾಗಿದೆ. ಕರಾವಳಿ ಬಂದರುಗಳಿಂದ ರಫ್ತು ವಹಿವಾಟು ಹೆಚ್ಚಿಸಲು ಹಾಗೂ ಪ್ರವಾಸೋದ್ಯಮಕ್ಕೆ ಇದು ಸಹಕಾರಿಯಾಗಲಿದೆ. ಯೋಜನೆಯನ್ನು ಕರ್ನಾಟಕ ಸರಕಾರ ಹಾಗೂ ರೈಲ್ವೆ ಇಲಾಖೆಯಿಂದ 50:50 ಅನುಪಾತದಲ್ಲಿ ಅನುಷ್ಠಾನಗೊಳಿಸಬೇಕೋ ಅಥವಾ ರೈಲ್ವೆ ಸಚಿವಾಲಯವೇ ಕಾರ್ಯಗತಗೊಳಿಸಬೇಕೋ ಎಂಬುದು ಮಾತ್ರ ಇದುವರೆಗೂ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ 3 ದಶಕಗಳ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬೇಡಿಕೆಗೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸಹಜವಾಗಿ ಕರಾವಳಿ ಜನರಿಗೆ ಅತೀವ ಸಂತಸವಾಗಿದೆ.

Leave a Reply

Your email address will not be published. Required fields are marked *

error: Content is protected !!