ಭಾಗ 1
-ಎಸ್.ಪ್ರಕಾಶ್ ಬಾಬು
ಮಾನವರ ಬದುಕು ಎಂದಿಗೂ ನಿಂತ ನೀರಲ್ಲ. ಅದೂ ಎಂದಿಗೂ ನದಿಯಂತೆ ಚಲನಶೀಲವಾಗಿರಬೇಕು ಅಂತ ಅನುಭಾವಿಗಳು ಹೇಳುವ ಮಾತಿದೆ. ಇದಕ್ಕೆ ಒಪ್ಪುವಂತೆ ಬಾಳಿದ್ದು ಇತ್ತೀಚೆಗೆ ನಿಧನರಾದ ಕೆ.ಬಿ.ಗಣಪತಿ ಅವರು. ಕೆಬಿಜಿ ಎಂದೇ ನಮಗೆಲ್ಲಾ ಆದರಣೀಯ ಗುರುವಾಗಿದ್ದವರು. ಕ್ರಿಯಾಶೀಲತೆಯೆ ಜೀವಂತಿಕೆ ಎಂದು ಅವರು ಬದುಕಿದ ರೀತಿಯೇ ನಮಗೆಲ್ಲರಿಗೂ ಮಾರ್ಗದರ್ಶಿ ಮಾತ್ರವಲ್ಲ, ಸ್ಪೂರ್ತಿಧಾಯಕವೂ ಆಗಿತ್ತು. ಒಬ್ಬ ಬರಹಗಾರನಿಗೆ ಬರವಣಿಗೆಯೇ ಆಮ್ಲಜನಕ ಎಂದು ನಂಬಿ ಬದುಕಿದ್ದರಿಂದಲೇ ಅವರು ಮೈಸೂರಿನ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಕಾರಣವಾಯಿತು. ನಾನು ಅವರೊಂದಿಗೆ ಕೆಲ ಕಾಲ ಕೆಲಸ ಮಾಡಿದ ಅನುಭವದಲ್ಲೇ ಹೇಳುವುದಾದರೆ, ಅವರೊಬ್ಬ ಅನುಭವದ ಭರಣಿಯಲ್ಲಿ ಮೂಡಿದ ನೈಜ ಪತ್ರಿಕೋದ್ಯಮಿ.
ಕೆ.ಬಿ.ಗಣಪತಿ ಅವರು ಹುಟ್ಟಿದ್ದು ಕೊಡಗು ಜಿಲ್ಲೆ ಉತ್ತರ ಭಾಗದ ಕುಂಜಿಲ (ಕಕ್ಕಬ್ಬೆ) ಅಲ್ಲಿ ಶಿಕ್ಷಕರಾಗಿದ್ದ ಕಲ್ಯಾಟಂಡ ಎ ಬೋಪಯ್ಯ ಮತ್ತು ಕೆ.ಬಿ.ಮುತ್ತವ್ವ ದಂಪತಿಯ ನಾಲ್ವರು ಮಕ್ಕಳಲ್ಲಿ ಎರಡನೆಯವರಾಗಿ ಕ್ರಿ.ಶ.೧೯೩೯ರ ಡಿಸೆಂಬರ್.೨೭ ರಂದು ಜನಿಸಿದರು. ಕೆ.ಬಿ.ಗಣಪತಿ ಅವರು ಕಲಾ ಮತ್ತು ಕಾನೂನು ಪದವೀಧರರಾಗಿದ್ದರು. ೧೯೬೧ ರಿಂದ ೬೪ರವರೆಗೆ ಅವರು ಬೆಂಗಳೂರಿನಲ್ಲಿ ಹೈಕೋರ್ಟ್ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಪತ್ರಕರ್ತರಾಗುವ ಆಸೆಯಿಂದ ಮುಂಬೈಗೆ ತೆರಳಿ, ಅಲ್ಲಿನ ‘ಭಾರತೀಯ ವಿದ್ಯಾ ಭವನ್’ನಲ್ಲಿ ಪತ್ರಿಕೋದ್ಯಮದ ಡಿಪ್ಲೋಮಾ ಪಡೆದು, ೧೯೭೦ರವರೆಗೂ ಮುಂಬೈನ “ಫ್ರೀ ಪ್ರೆಸ್ ಜರ್ನಲ್” ಮತ್ತು “ಇಂಡಿಯನ್ ಎಕ್ಸ್ಪ್ರೆಸ್”ನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು. ನಂತರ ಅವರು ಪುಣೆಯಲ್ಲಿ ನೆಲೆಸಿ, “ಸನ್‌ಬೀಮ್ ಅಡ್ವರ್ಟೈಸಿಂಗ್” ಎಂಬ ಜಾಹೀರಾತು ಸಂಸ್ಥೆ ಸ್ಥಾಪಿಸಿದರು. ೧೯೭೬ರಲ್ಲಿ ಮೈಸೂರಿನ ಮಹಾರಾಜ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಕೆ.ಕೆ.ದೇವಮ್ಮರನ್ನು ವಿವಾಹವಾದಾಗ ಮೈಸೂರಿನಲ್ಲೇ ಸಣ್ಣ ಪತ್ರಿಕೆ ಆರಂಭಿಸಲು ನಿರ್ಧರಿಸಿದರು.
ನಾನು ಕಂಡAತೆ ಅವರೆಂದೂ ತಮ್ಮ ಚೇಂಬರ್‌ನಲ್ಲಿ ಸುಮ್ಮನೆ ಕೂರುತ್ತಿರಲಿಲ್ಲ. ಸದಾ ಏನಾದರೊಂದು ಬರೆಯುತ್ತಿದ್ದರು. ತಮ್ಮ ಸಂಪಾದಕೀಯವನ್ನು ತಾವೇ ಬರೆಯುವ ಕೆಲವೇ ಕೆಲವು ಸಂಪಾದಕರ ಸಮೂಹದಲ್ಲಿ ಕೆಬಿಜಿ ಅಗ್ರಗಣ್ಯರಾಗಿದ್ದರು. ಓದುಗರ ಪತ್ರವನ್ನು ತಾವೇ ಓದಿ ಪ್ರಕಟಿಸುವಷ್ಟು ಶ್ರದ್ದೆ ಆಸ್ಥೆ ಇದ್ದಂಥ ಸಂಪಾದಕರಾಗಿದ್ದರು. ಇವರಷ್ಟು ಅಂಕಣ ಬರೆದ ಪತ್ರಿಕಾ ಸಂಪಾದಕರು ರಾಜ್ಯಮಟ್ಟದಲ್ಲಿರಲಿ, ರಾಷ್ಟçಮಟ್ಟದಲ್ಲೂ ಇಲ್ಲ. ಸರಿಸುಮಾರು ೪೭ ವರ್ಷಗಳ ಕಾಲ “ಸ್ಟಾರ್ ಆಫ್ ಮೈಸೂರ್”ಗೆ ‘ಅಬ್ರಕದಬ್ರ’ “ಮೈಸೂರು ಮಿತ್ರ”ನಿಗೆ ‘ಛೂ ಮಂತ್ರ’ ಹಾಕುತ್ತಾ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲು ನಿರರ್ಗಳವಾಗಿ ಬರೆಯುತ್ತಿದ್ದ ಕೆಬಿಜಿ ಅವರ ವೃತ್ತಿ ಬದ್ದತೆ ವಿಶ್ವಮಟ್ಟದಲ್ಲಿ ಹೇಗೋ ಗೊತ್ತಿಲ್ಲ, ರಾಷ್ಟç ಮಟ್ಟದಲ್ಲಂತೂ ನಾನು ಕೇಳಿಲ್ಲ. ಇಂಥ ಸಾಧಕ ಪತ್ರಿಕೋದ್ಯಮಿ ಪತ್ರಕರ್ತರಿಗೆ ರಾಷ್ಟçಮಟ್ಟದ ಪ್ರಶಸ್ತಿ ಗೌರವಗಳು ದೊರಕಬೇಕಿತ್ತು. ಪ್ರಾಯಶಃ ರಾಜ್ಯ ಮಟ್ಟದಲ್ಲಾದರೂ ಸರ್ಕಾರದ ಮಟ್ಟದಲ್ಲಿ ಗೌರವಾದಾರಗಳು ಸಿಗಬೇಕಿತ್ತು. ಜಿಲ್ಲಾ ಮಟ್ಟದ ಪತ್ರಿಕೆಗಳ ಸಂಪಾದಕರು-ಪತ್ರಕರ್ತರು ಎನ್ನುವ ಉದಾಸೀನತೆಯಿಂದ ಅವರಿಗೆ ಸಿಗಬೇಕಿದ್ದ ಸಾಧನೆಯ ಗೌರವ ಸಿಗಲಿಲ್ಲ ಅನ್ನೋದು ಬೇಸರದ ವಿಷಯ. ರಾಜ್ಯದಲ್ಲಿರುವ ಜಿಲ್ಲಾ ಮಟ್ಟದ ಪತ್ರಿಕೋದ್ಯಮಕ್ಕೆ ಕೆ.ಬಿ.ಗಣಪತಿ ನೀಡಿದ ಸ್ಪೂರ್ತಿಧಾಯಕ ಕೊಡುಗೆಯನ್ನು ಗುರುತಿಸುವುದರಲ್ಲಿ ಕನ್ನಡ ಮಾಧ್ಯಮ ಕ್ಷೇತ್ರ ಸೋತಿರುವುದು ದುರಾದೃಷ್ಟಕರ ಸಂಗತಿ. ಸುದ್ದಿ ಮನೆಯೊಳಗಿನ ಸಣ್ಣತನಗಳು ಕೆ.ಬಿ.ಗಣಪತಿಯಂಥ ಸಾಧಕರಿಗೆ ಸಂಕುಚಿತ ಮೊಳೆರೋಗಗಳು ಬಾಧಿಸುತ್ತವೆ ಅನ್ನೋದು ಹೊಸ ವಿಚಾರವೇನೂ ಅಲ್ಲ. ಅದು ಹುಟ್ಟಿದಾಗಿನಿಂದ ಇರುವ ಅಂಟುರೋಗ.
ಕೆ.ಬಿ.ಗಣಪತಿ ಅವರು ರಾಷ್ಟç ಮತ್ತು ರಾಜ್ಯ ಮಟ್ಟದ ಪತ್ರಕರ್ತರಿಗಿಂತ ಕಡಿಮೆ ಇರಲಿಲ್ಲ. ಮುಂಬೈನAಥ ನಗರದಲ್ಲಿ, ಅದರಲ್ಲೂ ಅಂದು ದೇಶದ ಅಗ್ರಗಣ್ಯ ಪತ್ರಿಕೆ ಎನಿಸಿದ “ಇಂಡಿಯನ್ ಎಕ್ಸ್ಪ್ರೆಸ್” ಮತ್ತು “ಫ್ರೀ ಪ್ರೆಸ್ ಜರ್ನಲ್”ನಲ್ಲಿ ಸುಮಾರು ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಮುಂಬೈನ ಮಹಾನಗರಿಯಲ್ಲಿ ಕಲಿತ ಪತ್ರಿಕೋದ್ಯಮದ ಅನುಭವವನ್ನು ಮೈಸೂರಿನಂಥ ಪುಟಾಣಿ ನಗರಕ್ಕೆ ಧಾರೆ ಎರೆದರು. ಇದರಿಂದಾಗಿ ಮೈಸೂರು ನಗರಕ್ಕಷ್ಟೇ ಸೀಮಿತವಾಗಿದ್ದ ಸಣ್ಣ ಪತ್ರಿಕೆಗಳು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವಂತಾದವು. ಮೈಸೂರು ನಗರದಲ್ಲಿ ಸಣ್ಣ ಪತ್ರಿಕೆಗಳ ದೊಡ್ಡ ಕ್ರಾಂತಿಯೇ ೪ ದಶಕಗಳ ಹಿಂದೆ ನಡೆಯಿತು. ಮೈಸೂರಿನ ಸಣ್ಣ ಪತ್ರಿಕೆಗಳಲ್ಲಿ ನಡೆದ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದ ಕೆಬಿಜಿ ಮೈಸೂರಿನ ಪತ್ರಿಕೋದ್ಯಮಕ್ಕೆ ಆಧುನಿಕ ಆಯಾಮ ನೀಡಿದ ಧೀಮಂತರು ಎಂದರೆ ತಪ್ಪಾಗುವುದಿಲ್ಲ. ಮೈಸೂರಿನ ಪತ್ರಿಕೋದ್ಯಮಕ್ಕೆ ಅಡಿಗಲ್ಲು ಇಟ್ಟವರು ತಾತಯ್ಯ ವೆಂಕಟಕೃಷ್ಣಯ್ಯರಾದರೆ, ಆ ಅಡಿಗಲ್ಲಮೇಲೆ ಆಧುನಿಕ ಪತ್ರಿಕೋದ್ಯಮದ ಮೈಲುಗಲ್ಲು ನೆಟ್ಟವರು ಕೆ.ಬಿ.ಗಣಪತಿ ಅಂತ ನಿಸ್ಸಂದೇಹವಾಗಿ ಹೇಳಬಹುದು. ಏಕೆಂದರೆ, ಸಣ್ಣ ಪತ್ರಿಕೆಗಳ ತವರೂರು ಎನಿಸಿದ ಮೈಸೂರಿನಲ್ಲಿ ಸಣ್ಣ ಪತ್ರಿಕೆಗಳು ಸಹ ದೊಡ್ಡಪತ್ರಿಕೆಗಳಿಗೆ ಸರಿಸಮನಾಗಿ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟವರೇ ಕೆ.ಬಿ.ಗಣಪತಿ. ಇವರಿಲ್ಲದಿದ್ದರೆ, ಮೈಸೂರಿನಲ್ಲಿ ಜಿಲ್ಲಾಮಟ್ಟದ ಪತ್ರಿಕೆಗಳೇ ಹುಟ್ಟುತ್ತಿರಲಿಲ್ಲ. ರಾಜ್ಯ ಮಟ್ಟದ ಪತ್ರಿಕೆಗಳಂತೆಯೇ, ಜಿಲ್ಲಾ ಮಟ್ಟದ ಪತ್ರಿಕೆಗಳಿಗೂ ಒಂದು ನೆಲೆ ಇದೆ, ಬೆಲೆ ಇದೆ ಎಂಬುದನ್ನು ಮೈಸೂರು ಮಾತ್ರವಲ್ಲದೆ, ಕರ್ನಾಟಕದ ಪತ್ರಿಕೋದ್ಯಮಕ್ಕೂ ತಿಳಿಸಿಕೊಟ್ಟರು. ಇದರಿಂದ ಮೈಸೂರು ಮಾತ್ರವಲ್ಲದೆ, ಕರ್ನಾಟಕದಾದ್ಯಂತ ಕಳೆದ ನಾಲ್ಕು ದಶಕಗಳಿಂದ ಜಿಲ್ಲಾ ಮಟ್ಟದ ಪತ್ರಿಕೆಗಳ ಕ್ರಾಂತಿಯೇ ಆಯಿತು. ಈ ಹಿನ್ನೆಲೆಯಲ್ಲಿ ‘ಮೈಸೂರು ಪತ್ರಿಕೋದ್ಯಮದ ಪಿತಾಮಹ’ ತಾತಯ್ಯ ವೆಂಕಟಕೃಷ್ಣಯ್ಯ (೧೮೪೪-೧೯೩೩) ರಾದರೆ, ನಮ್ಮ ಕೆ.ಬಿ.ಗಣಪತಿ (೧೯೩೮-೨೦೨೫) ಅವರು ‘ಆಧುನಿಕ ಮೈಸೂರು ಪತ್ರಿಕೋದ್ಯಮದ ಪಿತಾಮಹ’ ಎನ್ನುವುದರಲ್ಲಿ ಎರಡೂ ಮಾತಿಲ್ಲ.
೧೯೯೧ರ ಆಗಸ್ಟ್.೧೪ ರಂದು “ಮೈಸೂರು ಮಿತ್ರ” ಉಪ ಸಂಪಾದಕನಾಗಿ ಸೇರಿದಾಗ ನಾನಿನ್ನೂ ಪದವಿ ವಿದ್ಯಾರ್ಥಿಯಾಗಿದ್ದೆ. ನನ್ನ ಅನುಭವ ಮತ್ತು ಬರಹ ಇಷ್ಟವಾಗಿ ಕೆಲಸಕ್ಕೆ ತೆಗೆದುಕೊಂಡಿದ್ದರು. ಅಂದು ಮಧ್ಯಾಹ್ನ ಮೂರು ಗಂಟೆಗೆಲ್ಲಾ ಮನೆಗೆ ಹೋಗುತ್ತಿದ್ದವರು, ನಾಲ್ಕು ಗಂಟೆಯಾದರೂ ಹೋಗಿರಲಿಲ್ಲ. ನಾನು ಬರೆದ ಸುದ್ದಿಗಳನ್ನುö ಓದಲೆಂದೇ ಕಾಯುತ್ತಿದ್ದರೆನಿಸುತ್ತೆ. “ಆಯ್ತಾ, ನ್ಯೂಸ್ ಬರೆದಿದ್ದು, ಕೊಡಿಲ್ಲಿ” ಅಂತ ನನ್ನ ಟೇಬಲ್ ಬಳಿಯೇ ಬಂದು ನಾನು ಡಿಟಿಪಿಗೆ ಕೊಡಲೆಂದು ಜೋಡಿಸಿಟ್ಟಿದ್ದ ಸುದ್ದಿಗಳನ್ನೆಲ್ಲ ಓದಿ ಸಂತುಷ್ಟರಾದರು. ‘ಭೇಷ್’ ಅಂತ ಸುಮ್ಮನೆ ಹೇಳದೆ, ಪಕ್ಕದಲ್ಲಿದ್ದ ನನ್ನ ಹಿರಿಯ ಸಹೋದ್ಯೋಗಿಗಳಿಗೂ, “ನೋಡಿ ಹೊಸ ಹುಡುಗ ಎಷ್ಟು ಚೆನ್ನಾಗಿ ಬರೆಯುತ್ತಾನೆ, ನೀವು ಅವನಿಂದ ಕಲಿತುಕೊಳ್ಳಿ” ಅಂತ ಹೇಳಿ ಛೇಡಿಸಿದ್ದರು. ಪ್ರತಿಭೆಯನ್ನು ಗುರುತಿಸುವುದರಲ್ಲಿ ಕೆಬಿಜಿ ಹಿರಿಯರು-ಕಿರಿಯರು ಅಂತ ಭೇದವೆಣಿಸುತ್ತಿರಲಿಲ್ಲ. ಮೆಚ್ಚಿದ್ದನ್ನು ನೇರವಾಗಿ ಹೇಳಿ ಬಿಡುತ್ತಿದ್ದರು. (ನಾಳೆಗೆ ಮುಂದುವರೆಯುವುದು)

