Headlines

ಹಿರಿಯೂರು ವೈದ್ಯಾಧಿಕಾರಿ ಮನೆ ಮೇಲೆ ಲೋಕಾ ದಾಳಿ: ರಾಶಿಗಟ್ಟಲೆ ನಗದು, ಚಿನ್ನ ಪತ್ತೆ!

ಚಿತ್ರದುರ್ಗ, ಜುಲೈ 29: ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ (ಜುಲೈ 29) ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಹಾಗೂ ಇತರ ಆಸ್ತಿಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದರು. ಲೋಕಾಯುಕ್ತ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್​ಗೆ ಸೇರಿದ ಮನೆ, ಕ್ಲಿನಿಕ್ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಹಿರಿಯೂರು ತಾಲೂಕಿನ ಆದಿವಾಲ ಗ್ರಾಮ ಮೂಲದ ಡಾ.ವೆಂಕಟೇಶ್ ಗ್ರಾಮದಲ್ಲಿ ಒಂದು ಕ್ಲಿನಿಕ್ ತೆರೆದಿದ್ದಾರೆ. 6 ತಿಂಗಳ ಹಿಂದಷ್ಟೇ ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯಲ್ಲಿ ದೊಡ್ಡ ಮನೆ ಕಟ್ಟಿಸಿದ್ದಾರೆ.

ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮನೆ, ಕ್ಲಿನಿಕ್ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಅರ್ಧ ಕೆಜಿ ಚಿನ್ನ, 7 ನಿವೇಶನ ಪತ್ರ, 2 ಕಡೆ ಜಮೀನು ಖರೀದಿ ಮಾಡಿರುವ ಪತ್ರಗಳು ಅಧಿಕಾರಿಗಳ ಕೈ ಸೇರಿವೆ. ಸುಮಾರು 3 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ ಆಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳ ಮೂಲದಿಂದ ತಿಳಿದುಬಂದಿದೆ.

ಹಿರಿಯೂರಿನ ಯರಗುಂಟೇಶ್ವರ ಬಡಾವಣೆಯಲ್ಲಿನ ಬೃಹತ್ ಮನೆ ಯಾವ ರಾಜಕಾರಣಿಯ ಮನೆಗೂ ಕಡಿಮೆಯೇನಿಲ್ಲ. ಹೋಂ ಥೇಟರ್ ಒಳಗೊಂಡಿರುವ ಕಟ್ಟಡ ಇದಾಗಿದ್ದು ಮನೆ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. 40X60 ಅಡಿಯ 7 ಸೈಟ್​ಗಳಾಗಿವೆ. ಸುಮಾರು 8 ಎಕರೆಗೂ ಅಧಿಕ ಜಮೀನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಅಧಿಕಾರಿ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ವಸ್ತುಗಳು ಪತ್ತೆ
ದಾಸರಹಳ್ಳಿ ಬಿಬಿಎಂಪಿಯ ಕಂದಾಯ ಅಧಿಕಾರಿ ವೆಂಕಟೇಶ್​ಗೆ ಸೇರಿದ ಮನೆಯಲ್ಲಿ ಚಿನ್ನಾಭರಣ, ಹಣ, ಕಾರು, ಆಸ್ತಿ-ಪಾಸ್ತಿ ಹೀಗೆ ಕೋಟ್ಯಾಂತರ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ವೆಂಕಟೇಶ್ ಹೆಸರಿನಲ್ಲಿ ಬೆಂಗಳೂರಿನ ತಲಘಟ್ಟಪುರದಲ್ಲಿ ಒಂದು ಬಂಗಲೆ ಇದೆ. ಅಲ್ಲದೆ, ನಂಜನಗೂಡಿನಲ್ಲಿ 4 ಎಕರೆಯಲ್ಲಿ ಒಂದು ಫಾರ್ಮ್ )ಹೌಸ್ ಇದೆ.

ಬಿಡಿಎ ಅಧಿಕಾರಿಯಾಗಿರುವ ಓಂಪ್ರಕಾಶ್ ಮನೆ ಮೇಲೂ ಸಹ ಲೋಕಾಯುಕ್ತ ದಾಳಿ ನಡೆಸಿದೆ. ಓಂಪ್ರಕಾಶ್​ ಕೊಡಿಗೆಹಳ್ಳಿ ಬಳಿ ಒಂದು ಬಂಗಲೆ ಮತ್ತು ಐಷರಾಮಿ ಕಾರುಗಳನ್ನು ಸಹ ಹೊಂದಿದ್ದಾರೆ. ಓಂಪ್ರಕಾಶ್ ಮನೆಯಲ್ಲಿ ಪತ್ತೆಯಾದ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸೇರಿದಂತೆ, ಆಸ್ತಿ-ಪಾಸ್ತಿ ದಾಖಲಾತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಹಚ್ಚಿದರು. ಓಂಪ್ರಕಾಶ್​ನ ಬಿಡಿಎ ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ‌ ಮಾಡಿ, ಕೆಲವೊಂದು ದಾಖಲೆಗಳನ್ನು ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!