ಬೆಂಗಳೂರು, ಜುಲೈ 30: ಮೈಸೂರು ಜಿಲ್ಲೆಯ ಕೆ.ಆರ್.ನಗರ ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಭವಿಷ್ಯ ಬುಧವಾರ (ಜುಲೈ 30) ದಂದು ನಿರ್ಧಾರವಾಗಲಿದೆ. 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿಯೋ? ಅಥವಾ ಅಲ್ಲವೋ? ಎಂದು ತೀರ್ಪು ನೀಡಲಿದೆ. ಕಳೆದ 14 ತಿಂಗಳಿನಿಂದ ಸೆರೆವಾಸದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ನಾಳೆಯ ತೀರ್ಪು ಮಹತ್ವದ್ದಾಗಲಿದೆ.
ಸರಣಿ ಅತ್ಯಾಚಾರ ಆರೋಪ ಹೊತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೊಳಗಾಗಿ 14 ತಿಂಗಳು ಕಳೆದಿವೆ. ಮೂರು ಅತ್ಯಾಚಾರ ಪ್ರಕರಣ, ಒಂದು ಲೈಂಗಿಕ ದೌರ್ಜನ್ಯ ಹೀಗೆ ಒಟ್ಟು ನಾಲ್ಕು ಪ್ರಕರಣಗಳ ಪೈಕಿ ಒಂದು ಪ್ರಕರಣ ಈಗ ನಿರ್ಣಾಯಕ ಹಂತ ತಲುಪಿದ್ದು, ಬುಧವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ದೃಶ್ಯವಿದ್ದ ಪೆನ್ ಡ್ರೈವ್ಗಳನ್ನು ಹಾಸನ ಕ್ಷೇತ್ರದಾದ್ಯಂತ ಹಂಚಲಾಗಿತ್ತು. ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ತನಿಖೆ ಆರಂಭವಾಯಿತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ, ಕೆ.ಆರ್.ನಗರದ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖೆ ನಡೆಸಿದ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸಿತ್ತು. ಇದಾದ ಬಳಿಕ 2024ರ ಡಿಸೆಂಬರ್ 30 ರಂದು ಕೇಸ್ ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ವರ್ಗಾವಣೆಯಾಗಿತ್ತು. ಕೇಸ್ ವರ್ಗಾವಣೆಯಾದ ಕೇವಲ 7 ತಿಂಗಳಿನಲ್ಲಿ ಸಾಕ್ಷ್ಯ ವಿಚಾರಣೆ ಪೂರ್ಣಗೊಳಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ನಾಳೆಗೆ ತೀರ್ಪು ಕಾಯ್ದಿರಿಸಿದ್ದಾರೆ.
ಐಪಿಸಿ ಸೆಕ್ಷನ್ 376 (2)(k) ಅಡಿ ಮಹಿಳೆಯ ಮೇಲೆ ಹಕ್ಕು ಚಲಾಯಿಸುವ ಸ್ಥಿತಿಯಲ್ಲಿದ್ದು ಅತ್ಯಾಚಾರ ಎಸಗುವುದು, 376 (2) (n) ಅಡಿ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು, 354(A) ಲೈಂಗಿಕತೆ ಬೇಡಿಕೆ ಇಡುವುದು, 354 (B) ಮಹಿಳೆಯನ್ನು ವಿವಸ್ತ್ರಗೊಳಿಸುವುದು, 354 (c) ಮಹಿಳೆಯ ಅಶ್ಲೀಲ ದೃಶ್ಯ ಚಿತ್ರೀಕರಿಸುವುದು, 506 ಜೀವ ಬೆದರಿಕೆ, 201 ಸಾಕ್ಷ್ಯನಾಶದ ಅಡಿ ದೋಷಾರೋಪ ಹೊರಿಸಲಾಗಿದೆ. ಒಂದು ವೇಳೆ ಕೋರ್ಟ್ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಮಾನಿಸಿದರೆ ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಿತಾವಧಿ ವರೆಗೂ ಸೆರೆವಾಸದ ಶಿಕ್ಷೆ ವಿಧಿಸಲು ಕೋರ್ಟ್ಗೆ ಅವಕಾಶವಿರಲಿದೆ.
ಪ್ರಾಸಿಕ್ಯೂಷನ್ ಆರೋಪ
2021 ರ ಕೋವಿಡ್ ಸಂದರ್ಭದಲ್ಲಿ ಹೊಳೆನರಸೀಪುರದ ಗನ್ನಿಕಾಡಾದ ಫಾರ್ಮ್ಹೌಸ್ನಲ್ಲಿದ್ದ ಪ್ರಜ್ವಲ್ ರೇವಣ್ಣ ಮನೆಕೆಲಸಕ್ಕೆ ನೇಮಕವಾಗಿದ್ದ ಮಹಿಳೆಯನ್ನು ನೀರು ತರುವ ನೆಪದಲ್ಲಿ 1 ನೇ ಮಹಡಿಗೆ ಕರೆಸಿಕೊಂಡು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಮನೆ ಕ್ಲೀನ್ ಮಾಡಬೇಕೆಂದು ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಸೂಚನೆ ಮೇರೆಗೆ ಬಂದಿದ್ದಾಗಲೂ 3 ನೇ ಮಹಡಿಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಲ್ಲದೇ ಅದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ನಂತರ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ರೆಕಾರ್ಡ್ ಮಾಡಿಕೊಂಡ ಮೊಬೈಲ್ ನಾಶಪಡಿಸಿದ್ದಾರೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಮಹಿಳೆಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಘಟನೆಗೆ ಸಾಕ್ಷಿಯಾಗಿ ಮೊಬೈಲ್ನಲ್ಲಿ ಚಿತ್ರೀಕರಿಸಿದ ವಿಡಿಯೋ, ಸಂತ್ರಸ್ತೆಯ ಹೇಳಿಕೆ, ಆಕೆಯ ಒಳ ಉಡುಪಿನಲ್ಲಿ ಪ್ರಜ್ವಲ್ ರೇವಣ್ಣನ ವೀರ್ಯದ ಕಲೆ ಪತ್ತೆಯಾಗಿದೆ.
ಪ್ರಜ್ವಲ್ ಪರ ವಕೀಲರ ವಾದ
ಗನ್ನಿಕಾಡಾದ ಫಾರ್ಮ್ ಹೌಸ್ ಪ್ರಜ್ವಲ್ ರೇವಣ್ಣಗೆ ಸೇರಿದ್ದಲ್ಲ. ಅಲ್ಲಿ ಮೊದಲನೇ ಮಹಡಿಯೇ ಇರಲಿಲ್ಲ, ಆ ಫಾರ್ಮ್ ಹೌಸ್ನಲ್ಲಿ ಮಹಿಳೆ ಕೆಲಸದಲ್ಲಿರಲಿಲ್ಲ, ಮಹಿಳೆ ಕೆ.ಆರ್.ನಗರದ ತನ್ನ ಮನೆಯಲ್ಲಿದ್ದರು. ಬೆಂಗಳೂರಿನ ಬಸವನಗುಡಿಯ ಮನೆಯೂ ಪ್ರಜ್ವಲ್ ರೇವಣ್ಣಗೆ ಸೇರಿದ್ದಲ್ಲ. ಹೀಗಾಗಿ, ಅಲ್ಲಿ ಇಂತಹ ಕೃತ್ಯ ನಡೆದೇ ಇಲ್ಲ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ರಾಜಕೀಯ ವೈಷಮ್ಯದಿಂದ ಕೇಸ್ ದಾಖಲಿಸಲಾಗಿದೆ. ಹೀಗಾಗಿ ಪ್ರಕರಣದಿಂದ ಖುಲಾಸೆಗೊಳಿಸಬೇಕು ಎಂದು ವಾದ ಮಂಡಿಸಿದ್ದಾರೆ.
26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು ಬುಧವಾರ ಮಹತ್ವದ ತೀರ್ಪು ಪ್ರಕಟಿಸಲಿದೆ. ಮೊದಲನೆ ಸಾಕ್ಷಿಯಾಗಿ ಹೇಳಿಕೆ ದಾಖಲಿಸುವಾಗ ಸಂತ್ರಸ್ತೆ ಕಣ್ಣೀರು ಹಾಕಿದರೆ, ಅಂತಿಮ ಹಂತದಲ್ಲಿ ಸಿಆರ್‌ಪಿಸಿ ಸೆಕ್ಷನ್ 313 ಅಡಿ ಹೇಳಿಕೆ ದಾಖಲಿಸುವಾಗ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಲಿದ್ದು, ಪ್ರಜ್ವಲ್ ರೇವಣ್ಣರ ರಾಜಕೀಯ ಭವಿಷ್ಯದ ಮೇಲೂ ಇದರ ಪರಿಣಾಮವಾಗಲಿದೆ.

