ಬೆಂಗಳೂರು, ಆಗಸ್ಟ್ 1: ಭಾರತದ ಆರ್ಥಿಕತೆ ಸತ್ತು ಹೋಗಿದೆ ಎಂದು ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಆಧಾರ ರಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಬಲಿಷ್ಠ ಆರ್ಥಿಕ ದೇಶವಾಗುತ್ತಿದೆ” ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, “ಡೊನಾಲ್ಡ್ ಟ್ರಂಪ್ ಅವರು ಕುರುಡರಾಗಿರಬಹುದು ಅಥವಾ ಅಜ್ಞಾನಿ ಆಗಿರಬೇಕು. ಟ್ರಂಪ್ ಅವರ ಹೇಳಿಕೆ ಒಪ್ಪುವಂತದ್ದಲ್ಲ” ಎಂದು ಅಸಮಾಧಾನ ಹೊರಹಾಕಿದರು.
“ಆಧುನಿಕ ಇತಿಹಾಸದಲ್ಲಿ ಇಷ್ಟೊಂದು ಅಸ್ಥಿರ, ಅನಾಗರಿಕ ಮತ್ತು ಬೇಜವಾಬ್ದಾರಿಯುತ ರಾಷ್ಟ್ರಮುಖ್ಯಸ್ಥರನ್ನು ನಾನು ಕಂಡಿಲ್ಲ. ಟ್ರಂಪ್ ಅವರು ಭಾರತದೊಂದಿಗೆ ಮಾತ್ರವಲ್ಲ, ಜಗತ್ತಿನಾದ್ಯಂತ ಪ್ರತೀ ದೇಶದೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಅವರು ತಮ್ಮ ದೀರ್ಘಕಾಲದ ಮಿತ್ರರಾಷ್ಟ್ರಗಳನ್ನು ಸಹ ಬಿಟ್ಟಿಲ್ಲ. ಅವರಲ್ಲಿ ಮೂಲಭೂತವಾಗಿ ಏನೋ ಸಮಸ್ಯೆ ಇದೆ” ಎಂದು ವ್ಯಂಗ್ಯವಾಡಿದ್ದಾರೆ.
“ರಾಜತಾಂತ್ರಿಕತೆ ಅಥವಾ ರಾಜಕೀಯದ ಮೂಲಕ ಅದನ್ನು ಪತ್ತೆ ಹಚ್ಚಲು ಅಥವಾ ಪರಿಹರಿಸಲು ಸಾಧ್ಯವಿಲ್ಲ. ಅವರ ಕೋಪದ ಸ್ವಭಾವದ ಬಗ್ಗೆ ಇದಕ್ಕಿಂತ ಹೆಚ್ಚಿಗೆ ಹೇಳುವುದು ಸರಿಯಲ್ಲ. ಭಾರತವು ವೈವಿಧ್ಯಮಯ ಮತ್ತು ಪ್ರಜಾಪ್ರಭುತ್ವವಾದಿ ಸಾರ್ವಭೌಮ ರಾಷ್ಟ್ರ. ಸ್ವಾತಂತ್ರ್ಯದ ನಂತರ ಅದು ಯಾವಾಗಲೂ ಅತ್ಯುನ್ನತ ರಾಷ್ಟ್ರೀಯ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಮೋದಿ ನೇತೃತ್ವದಲ್ಲಿ ಭಾರತವು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಂಡಿಲ್ಲ. ಈ ಬಗ್ಗೆ ನನಗೆ ಅತೀವ ಸಂತೋಷ ಮತ್ತು ಹೆಮ್ಮೆ ಇದೆ” ಎಂದರು.
“ಸಣ್ಣ ವ್ಯಾಪಾರಸ್ಥರು, ದೇಶದ ರೈತರ ಪರ ಮೋದಿ ಕಾಳಜಿ ವಹಿಸಿದ್ದಾರೆ. ಟ್ರಂಪ್ ಬೆದರಿಕೆಗೆ ಭಾರತ ಹೆದರುವುದಿಲ್ಲ. ಟ್ರಂಪ್ ಬೆದರಿಕೆಗೆ ಭಾರತ ಹೆದರುವುದಿಲ್ಲ. ಬೆದರಿಕೆಗಳಿಂದ ಭಾರತ ಎಂದಿಗೂ ಇನ್ನೊಬ್ಬರ ತಾಳಕ್ಕೆ ತಕ್ಕಂತೆ ಆರ್ಥಿಕತೆಗಳಿಂದ ಎಂದು ತೋರಿಸಿಕೊಟ್ಟಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆ ಆಗಿದೆ. ನಮ್ಮ ಆರ್ಥಿಕತೆಯನ್ನು ‘ಸತ್ತಿದೆ’ ಎಂದು ಹೇಳಲು ಟ್ರಂಪ್ ಅವರು ಕುರುಡರಾಗಿರಬೇಕು ಇಲ್ಲವೇ ಅಜ್ಞಾನಿಗಳಾಗಿರಬೇಕು” ಎಂದು ಕಿಡಿಕಾರಿದರು.
“ಟ್ರಂಪ್ ಅವರ ಹೇಳಿಕೆಗಳನ್ನು ಆನಂದಿಸಿ ಭಾರತದಲ್ಲಿ ಅವರ ಭ್ರಮೆಯ ವಕ್ತಾರರಾಗಲು ಹೊರಟಿರುವ ವಿರೋಧ ಪಕ್ಷದ ಕೆಲ ನಾಯಕರಿಗೆ ಎಚ್ಚರಿಕೆಯ ಮಾತು ಹೇಳಬಯಸುತ್ತೇನೆ. ಅವರ ಹತಾಶೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅವರು ತಮ್ಮನ್ನು ಮತ್ತು ತಮ್ಮ ಪಕ್ಷಗಳಿಗೆ ಹಾನಿ ಮಾಡಿಕೊಳ್ಳಬಾರದು. ಟ್ರಂಪ್ ಜೊತೆ ಇತಿಹಾಸದ ಕಸದ ಬುಟ್ಟಿಗೆ ಅವರು ಬಹುಬೇಗನೆ ಸೇರಬಾರದು” ಎಂದು ದೇವೇಗೌಡರು ವಾಗ್ದಾಳಿ ಮಾಡಿದರು.

