Headlines

ಮಳೆಗಾಲ ಬಳಿಕ ಬಿಬಿಎಂಪಿ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ..!!!

ಬೆಂಗಳೂರು, ಆಗಸ್ಟ್ 2: ನೆನೆಗುದಿಗೆ ಬಿದ್ದಿದ್ದ ಬಿಬಿಎಂಪಿ ಎಲೆಕ್ಷನ್‌ ಸದ್ಯದಲ್ಲೇ ನಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ. ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್‌ ಗಿರಿನಾಥ್‌ ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಡಿಸೆಂಬರ್‌ ಒಳಗೆ ಬಿಬಿಎಂಪಿಯ 5 ಪಾಲಿಕೆಗಳಿಗೆ ಎಲೆಕ್ಷನ್‌ ನಡೆಸಲು ಸರ್ಕಾರ ಸಿದ್ದವಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ ಈ ಸಂಜೆಗೆ ಲಭ್ಯವಿದೆ. 26 ಪುಟಗಳ ಪ್ರಮಾಣ ಪತ್ರದಲ್ಲಿ ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಿ, ಗಡಿ ಗುರುತಿಸಲಾಗಿದೆ. ಈ 5 ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಿದ್ದವಿರೋದಾಗಿ ತಿಳಿಸಿದ್ದಾರೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆ ರಚನೆ ಮಾಡಲಾಗಿದೆ ಎಂದು ಹೇಳಲಾಗಿದೆ.

ನವಂಬರ್‌ ಒಳಗೆ ಎಲ್ಲಾ ಜಿಬಿಎ ರಚನೆ ಕಾರ್ಯಗಳನ್ನು ಪೂರ್ಣಗೊಳಿಸಿ ಚುನಾವಣೆ ನಡೆಸಲು ಸಿದ್ದ ಎಂದು ಸರ್ಕಾರ ಪ್ರಮಾಣ ಪತ್ರ ಸಲ್ಲಿಸುತ್ತಿದ್ದಂತೆ ಕಳೆದ 5 ವರ್ಷಗಳಿಂದ ಚುನಾವಣೆಗಾಗಿ ಕಾಯುತ್ತಿದ್ದ ಆಕಾಂಕ್ಷಿಗಳು ನಿದ್ದೆಯಿಂದ ಎಚ್ಚೆತ್ತವರಂತೆ ಚುರುಕಾಗಿದ್ದಾರೆ. ಈಗಾಗಲೇ ಕೆಲ ಶಾಸಕರು ತಮ್ಮ ಬೆಂಬಲಿಗರೊಂದಿಗೆ ಚುನಾವಣೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದುವರೆಗೂ ಶಾಸಕರ ಕೈಗೆ ಸಿಗದೆ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಆಕಾಂಕ್ಷಿಗಳು ತಮ್ಮ ನಾಯಕರ ಮನೆಗಳಿಗೆ ದೌಡಾಯಿಸಿ ಅವರ ಆರ್ಶೀವಾದ ಪಡೆದು ಟಿಕೆಟ್‌ ಗಿಟ್ಟಿಸಿಕೊಳ್ಳುವ ಕಾರ್ಯಕ್ಕೂ ಕೈ ಹಾಕಿದ್ದಾರೆ ಎಂದು ತಿಳಿದುಬಂದಿದೆ.

2026ಕ್ಕೆ ಬಿಬಿಎಂಪಿ ಚುನಾವಣೆ?
ಸರ್ಕಾರ ಜಿಬಿಎ ಕಾರ್ಯವನ್ನು ನವೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಿದರೂ ಚುನಾವಣೆ ನಡೆಸಲು ನಮಗೆ 2 ತಿಂಗಳ ಸಮಯ ಬೇಕು ಎಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿರುವುದರಿಂದ ಎಲ್ಲಾ ಅಂದುಕೊಂಡಂತೆ ನಡೆದರೆ 2026ರ ಆರಂಭದಲ್ಲಿ ಬಿಬಿಎಂಪಿಯ 5 ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

error: Content is protected !!