Headlines

ಆಗಸ್ಟ್ 5 ರಂದು ಸಾರಿಗೆ ‌ಮುಷ್ಕರ ಮಾಡುತ್ತಿಲ್ಲ: ಅನಂತ ಸುಬ್ಬರಾವ್ ಸ್ಪಷ್ಟನೆ

ಬೆಂಗಳೂರು, ಆಗಸ್ಟ್ 3: ಇದೇ ಮಂಗಳವಾರ (ಆಗಸ್ಟ್ 5) ರಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬರುತ್ತಿರುವುದರಿಂದ ಸಾರಿಗೆ ನೌಕರರು ಮುಷ್ಕರ ಮಾಡುತ್ತಿಲ್ಲ. ಬದಲಿಗೆ ಬಸ್ ಸಂಚಾರ ಸ್ಥಗಿತಗೊಳಿಸಿ ಎಲ್ಲಾ ಸಿಬ್ಬಂದಿಗಳು ಮನೆಯಲ್ಲಿರುತ್ತಾರೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕೂಡಲೇ ರಾಜ್ಯಸರ್ಕಾರ ಸಾರಿಗೆ ನೌಕರರಿಗೆ 38 ತಿಂಗಳ ಅರಿಯರ್ಸ್​ ಕೊಡಬೇಕು. ಶಕ್ತಿ ಯೋಜನೆಯನ್ನ ನಾವು ಯಶಸ್ವಿಯಾಗಿ ನಿರ್ವಹಿಸ್ತಿದ್ದೇವೆ. ನಮ್ಮ ಸಿಬ್ಬಂದಿಗೆ ಒಂದು ಕೃತಜ್ಞತೆಯನ್ನ ಹೇಳಿದ್ರಾ ನೀವು? ಎಂದು ರಾಜ್ಯಸರ್ಕಾರವನ್ನು ಪ್ರಶ್ನಿಸಿದರು.

ನಮ್ಮ ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಹಗರಣ ಆಗಿಲ್ಲ. ಸಾರಿಗೆ ಸಿಬ್ಬಂದಿಗೆ ಸಿದ್ದರಾಮಯ್ಯ ಸರ್ಕಾರ ವಿಶ್ವಾಸ ದ್ರೋಹ ಮಾಡಿದೆ. ರಾಜ್ಯಸರ್ಕಾರ ವಿಶ್ವಾಸದ್ರೋಹ ಮಾಡಿದೆ ಎಂಬ ಭಾವನೆ ಬಂದಿದೆ. ಮುಷ್ಕರ ತಪ್ಪಿಸುವ ಅವಕಾಶ ಇದೆ. ಪೊಲೀಸ್ ಅಧಿಕಾರಿಗಳು ನಮ್ಮನ್ನು ಈಗಾಗಲೇ ಕರೆಯುತ್ತಿದ್ದಾರೆ. ಆದರೆ ನಮ್ಮನ್ನು ಅರೆಸ್ಟ್ ಮಾಡಿ ಪಾಕಿಸ್ತಾನ ಜೈಲಿಗೆ ಹಾಕುತ್ತೀರಾ? ನಮ್ಮನ್ನ ಕರೆದು ಸಮರ್ಪಕವಾಗಿ ಮಾತಾಡಿ. ಬೇರೆ ಯಾರದ್ದೋ ಮಾತು ಕೇಳಿ ಹಾಳಾಗಬೇಡಿ ಎಂದು ರಾಜ್ಯಸರ್ಕಾರಕ್ಕೆ ಕಿವಿಮಾತು ಹೇಳಿದರು.

ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯರ ಕಿವಿ ಹಿಂಡಬೇಕು. ನಮ್ಮ ಬೇಡಿಕೆಗಳನ್ನ ಈಡೇರಿಸಲು ಮುಂದಾಗಿ. ಆಗಸ್ಟ್ 5ರಂದು ನಾವು ಯಾವುದೇ ರೀತಿಯ ರ‌್ಯಾಲಿ ಮಾಡುವುದಿಲ್ಲ. ಸಿಎಂ ಸಿದ್ದರಾಮಯ್ಯನವರೇ ನಮಗೆ ದ್ರೋಹ ಮಾಡಬೇಡಿ. ಮರ್ಯಾದೆಯಾಗಿ ಸಾರಿಗೆ ಸಿಬ್ಬಂದಿ ಬೇಡಿಕೆಗಳನ್ನ ಈಡೇರಿಸಿ ಎಂದು ಎಚ್ಚರಿಕೆ ನೀಡಿದರು.

ಸಿಎಂ ನಾಳೆ ಸಭೆ ಕರೆದಿದ್ದಾರೆ ಹೋಗುತ್ತೇವೆ. ಕೊನೆಗಳಿಗೆಯಲ್ಲಿ ಸಭೆ ಕರೆಯಬೇಡಿ ಎಂದು ಮನವಿ ಮಾಡಿದ್ದೇವೆ. ಆದರೂ ಕೊನೆಯ ಗಳಿಗೆಯಲ್ಲೇ ಸಭೆ ಕರೆದಿದ್ದಾರೆ. ಎಸ್ಮಾ ಜಾರಿ ಮಾಡುತ್ತೇವೆ ಎಂಬುವುದು, ಮುಷ್ಕರ ಮಾಡಿದ್ರೆ ಸಂಬಳ ನೀಡುವುದಿಲ್ಲ ಎನ್ನುವುದು ಸರಿಯಲ್ಲ. ಏನಾದರೂ ಹಿಂದಿನ ಆದೇಶದಲ್ಲಿ ತಪ್ಪಾಗಿದ್ದರೆ ಅದನ್ನು ಬದಲಾವಣೆ ಮಾಡಿ. ನಮ್ಮ ಬೇಡಿಕೆಗಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಬೇಡಿ. ನಾಳೆಯ ಸಭೆಯಲ್ಲಿ ಹಳೆಯ ಹಾಡನ್ನು ಹಾಡಿದ್ರೆ, ಬಿಜೆಪಿ ಸರ್ಕಾರ ನೀಡಬೇಕಿರೋದು ಅನ್ನಬೇಡಿ. 500 ಕೋಟಿ ರೂಪಾಯಿ ಟಿಕೆಟ್ ಹಂಚಿಕೆ ಮಾಡಿದ್ರಿ, ಆದರೆ ನಿರ್ವಾಹಕ ಮತ್ತು ಚಾಲಕರಿಗೆ ಧನ್ಯವಾದ ಹೇಳಲಿಲ್ಲ ಎಂದು ಅನಂತ ಸುಬ್ಬರಾವ್ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!