ವಾಷಿಂಗ್ಟನ್, ಆಗಸ್ಟ್ 6: ತನ್ನ ಕಡು ವೈರಿ ರಷ್ಯಾದಿಂದ ತೈಲ ಖರೀದಿಸಿದ್ದೇವೆ ಎಂಬ ಕಾರಣಕ್ಕೆ ಭಾರತದ ವಿರುದ್ಧ ಕಿಡಿ ಕಾರುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ (ಮಂಗಳವಾರ) ಮುಂದಿನ 24 ಗಂಟೆಯೊಳಗೆ ಭಾರತದ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಕೊನೆಗೂ ತಾವು ಹೇಳಿದಂತೆಯೇ ಮಾಡಿರುವ ಟ್ರಂಪ್ ಇಂದು ಬುಧವಾರ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ವಿಧಿಸಿದ್ದಾರೆ. ಈ ಮೂಲಕ ಭಾರತದ ಮೇಲೆ ಅಮೆರಿಕ ಹೇರಿರುವ ವ್ಯಾಪಾರ ಸುಂಕ ಶೇ.50ರಷ್ಟಾಗಿದೆ!
ಆಗಸ್ಟ್ 27ರಿಂದ ಜಾರಿಗೆ ಬರಲಿರುವ ಈ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಜುಲೈ 30ರಂದು ಟ್ರಂಪ್ ಆಗಸ್ಟ್ 1ರಿಂದ ಭಾರತೀಯ ಆಮದುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಲಾಗುವುದು ಮತ್ತು ಹೆಚ್ಚುವರಿ ಅನಿರ್ದಿಷ್ಟ ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದರು. ಅದಾದ ಬಳಿಕ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಭಾರತದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಅದರಂತೆ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ 25% ವ್ಯಾಪಾರ ಸುಂಕವನ್ನು ಘೋಷಿಸಿದ್ದಾರೆ.
ಟ್ರಂಪ್ ಅವರ ಈ ಆದೇಶವು ಭಾರತೀಯ ಸರಕುಗಳ ಆಮದಿನ ಮೇಲಿನ ಒಟ್ಟು ಸುಂಕವನ್ನು ಶೇ. 50ಕ್ಕೆ ಹೆಚ್ಚಿಸಿದೆ. ಇದು ಚೀನಾದ ಮೇಲಿನ ಸುಂಕಕ್ಕಿಂತ ಶೇ. 20ರಷ್ಟು ಹೆಚ್ಚು ಮತ್ತು ಪಾಕಿಸ್ತಾನದ ಮೇಲಿನ ಸುಂಕಕ್ಕಿಂತ ಶೇ. 21ರಷ್ಟು ಹೆಚ್ಚು. ಇಂದು ಸಹಿ ಹಾಕಲಾದ ಕಾರ್ಯಕಾರಿ ಆದೇಶದಲ್ಲಿ ಟ್ರಂಪ್ ಈ ರೀತಿ ಬರೆದಿದ್ದಾರೆ. “ಭಾರತ ಸರ್ಕಾರವು ಪ್ರಸ್ತುತ ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ನಾನು ಕಂಡುಕೊಂಡಿದ್ದೇನೆ. ಹೀಗಾಗಿ ಹೆಚ್ಚುವರಿಯಾಗಿ ಭಾರತದಿಂದ ವಸ್ತುಗಳ ಆಮದಿನ ಸುಂಕವನ್ನು ವಿಧಿಸುವುದು ಅಗತ್ಯವೆಂದು ನಾನು ನಿರ್ಧರಿಸಿದ್ದೇನೆ” ಎಂದು ಬರೆದಿದ್ದಾರೆ.
“ಭಾರತ ಎಲ್ಲರಿಗಿಂತ ಹೆಚ್ಚಿನ ಸುಂಕವನ್ನು ಹೊಂದಿದೆ. ನಾವು ಸುಂಕವನ್ನು ಶೇ. 25ಕ್ಕೆ ನಿರ್ಧರಿಸಿದ್ದೆವು. ಆದರೆ ಮುಂದಿನ 24 ಗಂಟೆಗಳಲ್ಲಿ ನಾನು ಭಾರತದ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಏಕೆಂದರೆ ಭಾರತ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಈ ಮೂಲಕ ಅವರು ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧಕ್ಕೆ ಪರೋಕ್ಷವಾಗಿ ಹಣ ನೀಡುತ್ತಿದ್ದಾರೆ” ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ನಿನ್ನೆ ಮಂಗಳವಾರ ಹೇಳಿಕೆ ನೀಡಿದ್ದರು.

