Headlines

ಮತಗಳ್ಳತನ ಆರೋಪ: ರಾಹುಲ್ ಗಾಂಧಿಗೆ ರಾಜ್ಯ ಚುನಾವಣಾ ಆಯೋಗ ನೋಟಿಸ್

ಬೆಂಗಳೂರು, ಆಗಸ್ಟ್ 10: ಕಳೆದ ಲೋಕಸಭಾ ಚುನಾವಣೆ ವೇಳೆ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಕಳ್ಳತನವಾಗಿದೆ ಎಂದು ನೀವು ಮಾಡಿರುವ ಆರೋಪಗಳಿಗೆ ದಾಖಲೆಗಳನ್ನು ನೀಡಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಅವರಿಗೆ ರಾಜ್ಯ ಚುನಾವಣಾ ಆಯೋಗ ನೋಟಿಸ್​ ನೀಡಿದೆ.

ಮತಗಳ್ಳತನ ವಿಚಾರವಾಗಿ ರಾಹುಲ್​ ಗಾಂಧಿಯವರು ಆಗಸ್ಟ್​ 7ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಹೀಗಾಗಿ, ರಾಜ್ಯ ಚುನಾವಣಾ ಆಯೋಗ ಈ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದೆ.

ಚುನಾವಣಾ ಆಯೋಗ ನೀಡಿರುವ ಸೂಚನೆಗಳೇನು?
ನಿಮ್ಮ ಸುದ್ದಿಗೋಷ್ಠಿಯಲ್ಲಿ, ತೋರಿಸಿರುವ ದಾಖಲೆಗಳು ಭಾರತ ಚುನಾವಣಾ ಆಯೋಗದ ದಾಖಲೆಗಳಿಂದ ಬಂದಿವೆ ಎಂದು ನೀವು ಹೇಳಿದ್ದೀರಿ. “ಇದು ಚುನಾವಣಾ ಆಯೋಗದ ಡೇಟಾ” ಎಂದಿದ್ದೀರಿ.
ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ, ಶ್ರೀಮತಿ ಶಕುನ್ ರಾಣಿ 2 ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿದ್ದೀರಿ. “ಈ ಐಡಿ ಕಾರ್ಡ್ ಪರ್ ದೋ ಬಾರ್ ವೋಟ್ ಲಗಾಹೈ, ವೋ ಜೋ ಟಿಕ್ ಹೈ, ಪೋಲಿಂಗ್ ಬೂತ್ ಕೆ ಆಫೀಸರ್ ಕಿಹೈ” ಎಂದು ಹೇಳಿದ್ದೀರಿ.
ವಿಚಾರಣೆಯಲ್ಲಿ, ಶ್ರೀಮತಿ ಶಕುನ್ ರಾಣಿ ಅವರು ನೀವು ಆರೋಪಿಸಿದಂತೆ 2 ಬಾರಿ ಅಲ್ಲ, ಒಮ್ಮೆ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಕಚೇರಿ ನಡೆಸಿದ ಪ್ರಾಥಮಿಕ ವಿಚಾರಣೆಯು ಪ್ರಸ್ತುತಿಯಲ್ಲಿ ನೀವು ತೋರಿಸಿರುವ ಟಿಕ್ ಗುರುತು ಮಾಡಿದ ದಾಖಲೆ ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಯಲ್ಲ ಎಂದು ಬಹಿರಂಗಪಡಿಸುತ್ತದೆ.
ಆದ್ದರಿಂದ, ಶ್ರೀಮತಿ ಶಕುನ್ ರಾಣಿ ಅಥವಾ ಬೇರೆ ಯಾರಾದರೂ 2 ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ತೀರ್ಮಾನಿಸಿರುವ ಸಂಬಂಧಿತ ದಾಖಲೆಗಳನ್ನು ಒದಗಿಸುವಂತೆ ವಿನಂತಿಸಲಾಗಿದೆ.

ಇದರಿಂದ ಈ ಕಚೇರಿಯಿಂದ ವಿವರವಾದ ವಿಚಾರಣೆಯನ್ನು ಕೈಗೊಳ್ಳಬಹುದು. ಹೀಗಾಗಿ ಸಂಬಂಧಿಸಿದ ಆರೋಪಗಳಿಗೆ ದಾಖಲೆಗಳನ್ನು ಒದಗಿಸಿ ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ರಾಹುಲ್ ಗಾಂಧಿ ಅವರಿಗೆ ನೋಟೀಸ್ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!