Headlines

ಮತ ಕಳುವು ಆರೋಪ: ಪ್ರತಿಭಟನೆ ನಡೆಸಿದ ಇಂಡಿಯಾ ಮೈತ್ರಿಕೂಟದ ಸಂಸದರು ಅರೆಸ್ಟ್

ನವದೆಹಲಿ, ಆಗಸ್ಟ್11: ಮತಕಳುವಿನ ಆರೋಪ ಮಾಡಿರುವ ಪ್ರತಿಪಕ್ಷಗಳ ಒಕ್ಕೂಟದ ಸಂಸದರು ಲೋಕಸಭೆಯ ವಿ.ಪಕ್ಷ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಸಂಸತ್​ ಭವನದಿಂದ ಚುನಾವಣಾ ಆಯೋಗದ ಮುಖ್ಯ ಕಚೇರಿವರೆಗೆ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯನ್ನು ದೆಹಲಿ ಪೊಲೀಸರು ತಡೆದಿದ್ದಾರೆ.

ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಹಾಗೂ ಮತ ಕಳುವಿನ ಆರೋಪದ ಹಿನ್ನೆಲೆ ಈ ಪ್ರತಿಭಟನೆ ನಡೆದಿದೆ.

ಸಂಸತ್​ ಭವನದಿಂದ ಇಂದು ಸೋಮವಾರ ಬೆಳಗ್ಗೆ 11.30ಕ್ಕೆ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಇಲ್ಲಿಂದ ಒಂದು ಕಿ.ಮೀ ದೂರದ ಚುನಾವಣಾ ಆಯೋಗದ ಮುಖ್ಯ ಕಚೇರಿವರೆಗೆ ಸಾಗುತ್ತಿತ್ತು. ಈ ನಡುವೆ ರಸ್ತೆಗಳಿಗೆ ಬ್ಯಾರಿಕೇಡ್​ ಹಾಕಿ ಸಂಸದರ ಈ ಪ್ರತಿಭಟನೆಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ತಡೆದ ಹಿನ್ನೆಲೆ ಲೋಕಸಭಾ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಸಮಾಜವಾದಿ ಮುಖ್ಯಸ್ಥ ಅಖಿಲೇಶ್​ ಯಾದವ್​, ರಸ್ತೆಗೆ ಅಡ್ಡಲಾಗಿ ಇರಿಸಲಾಗಿದ್ದ ಬ್ಯಾರಿಕೇಡ್​ ಹತ್ತುವ ಪ್ರಯತ್ನ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದು, ಅವರು ಬ್ಯಾರಿಕೇಡ್​ ಎದುರಿನಲ್ಲೇ ಪ್ರತಿಭಟನೆಗೆ ಕುಳಿತರು.

ರಾಹುಲ್​ ಗಾಂಧಿ ಸೇರಿದಂತೆ ಹಲವರು ವಶಕ್ಕೆ: ಪೊಲೀಸ್​ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದರಿಂದ ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಶಿವಸೇನೆಯ ಸಂಜಯ್​ ರಾವತ್​ ಮತ್ತು ಟಿಎಂಸಿಯ ಸಾಗರಿಕಾ ಘೋಸ್​​​​ ಸೇರಿದಂತೆ ಅನೇಕ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಹುಲ್​ ಗಾಂಧಿ, “ಅವರು ಮಾತನಾಡಲು ಸಾಧ್ಯವಿಲ್ಲ ಎಂಬುದು ನಿಜಾಂಶವಾಗಿದೆ. ದೇಶದ ಮುಂದೆ ಸತ್ಯಾಂಶವಿದೆ. ಇದು ರಾಜಕೀಯ ಹೋರಾಟವಲ್ಲ. ಇದು ಸಂವಿಧಾನ ಉಳಿಸಲು ನಡೆದಿರುವ ಹೋರಾಟ. ಈ ಹೋರಾಟವು ಒಬ್ಬ ವ್ಯಕ್ತಿಗೆ ಒಂದು ಮತಕ್ಕಾಗಿ. ನಮಗೆ ಶುದ್ದ ಮತ್ತು ಸ್ಪಷ್ಟ ಮತಪಟ್ಟಿ ಬೇಕು” ಎಂದು ಆಗ್ರಹಿಸಿದರು.

ಪೊಲೀಸರ ಅನುಮತಿ ಇಲ್ಲದೆ ಪ್ರತಿಭಟನೆ:ಇಂಡಿಯಾ ಒಕ್ಕೂಟ ಸಂಸದರ ಪ್ರತಿಭಟನಾ ಮೆರವಣಿಗೆ ತಡೆದ ಕ್ರಮದ ಕುರಿತು ಮಾತನಾಡಿರುವ ದೆಹಲಿ ಪೊಲೀಸರು, ಈ ಪ್ರತಿಭಟನೆ ನಡೆಸುವ ಸಂಬಂಧ ಯಾವುದೇ ಅನುಮತಿಯನ್ನು ಪೊಲೀಸರಿಂದ ಪಡೆದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಪ್ರತಿಭಟನಾ ಮೆರವಣಿಗೆ ಹಿನ್ನೆಲೆ ದೆಹಲಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅನೇಕ ಪ್ರಮುಖ ಮಾರ್ಗಗಳಲ್ಲಿ ಬ್ಯಾರಿಕೇಡ್​ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣಾ ಆಯೋಗ ಕಚೇರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ವಾಹನ ಮತ್ತು ತ್ವರಿತ ಕಾರ್ಯಚರಣೆಯ ತಂಡಗಳನ್ನು ನಿಯೋಜಿಸಲಾಗಿದೆ. ಸುತ್ತಮುತ್ತಲಿನ ಸ್ಥಳದಲ್ಲಿ ಟ್ರಾಫಿಕ್​ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!