ಬೆಂಗಳೂರು, ಆಗಸ್ಟ್ 11: ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ದಿಢೀರನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೆ.ಎನ್ ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಕೆ.ಎನ್. ರಾಜಣ್ಣ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಗೀಕರಿಸಿದ್ದಾರೆ.
ರಾಜೀನಾಮೆ ಬಗ್ಗೆ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಬಳಿಕ ಸ್ಪಷ್ಟನೆ ನೀಡುತ್ತೇನೆ. ಯಾವ ವಿಚಾರಕ್ಕೆ ಹೈಕಮಾಂಡ್ ನನ್ನ ಮೇಲೆ ಗರಂ ಆಗಿದೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಹೇಳಿದ ಮೇಲೆ ಅಲ್ವಾ ಮಾತನಾಡುವುದು? ಎಂದು ಹೇಳಿದರು.
“ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಇದ್ದಾರೆ, ಅಲ್ಲೇ ಭೇಟಿಯಾಗುವೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಂತರ ಮಾತನಾಡುತ್ತೇನೆ. ನಾನು ಯಾವತ್ತೂ ಅಧಿಕಾರಕ್ಕೆ ಅಂಟಿಕೊಂಡವನು ಅಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ” ಎಂದರು.
ತಂದೆಯ ರಾಜಿನಾಮೆ ವಿಚಾರ ತಳ್ಳಿಹಾಕಿದ MLC ರಾಜೇಂದ್ರ!
ತಂದೆ, ಸಚಿವ ಸ್ಥಾನಕ್ಕೆ ರಾಜಣ್ಣ ರಾಜೀನಾಮೆ ನೀಡುತ್ತಾರೆ ಎಂಬುವುದು ಸುಳ್ಳು. ನಾನು ಈಗಷ್ಟೇ ನಮ್ಮ ತಂದೆಯ ಜೊತೆ ಮಾತನಾಡಿದ್ದೇನೆ. ಆ ರೀತಿ ಏನೂ ಇಲ್ಲ ಅಂತ ನಮ್ಮ ತಂದೆ ಹೇಳಿದ್ದಾರೆ ಎಂದು ಕೆ.ಎನ್.ರಾಜಣ್ಣ ಪುತ್ರ ಎಂಎಲ್ಸಿ ರಾಜೇಂದ್ರ ಹೇಳಿದ್ದಾರೆ.

