Headlines

ರೇಣುಕಾಸ್ವಾಮಿ ಕೊಲೆ ಕೇಸ್: ಮತ್ತೆ ಜೈಲು ಸೇರುತ್ತಿರುವ ದರ್ಶನ್ ಮುಂದಿರುವ ಆಯ್ಕೆಗಳಿವು…

ಬೆಂಗಳೂರು, ಆಗಸ್ಟ್ 14: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್, ನಟಿ ಪವಿತ್ರಾಗೌಡ ಹಾಗೂ ಇತರೆ ಕೆಲ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಷರತ್ತುಬದ್ಧ ಜಾಮೀನು ಆದೇಶವನ್ನು ಸುಪ್ರೀಂಕೋರ್ಟ್ ಇಂದು ರದ್ದುಗೊಳಿಸಿ ತೀರ್ಪು ನೀಡಿದೆ. ಇದರಿಂದ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಎಲ್ಲಾ 7 ಆರೋಪಿಗಳು ಮತ್ತೊಮ್ಮೆ ಜೈಲು ಸೇರುತ್ತಿದ್ದಾರೆ. ಅದರಲ್ಲೂ ನಟ ದರ್ಶನ್​ಗೆ ಎಲ್ಲರಿಗಿಂತಲೂ ತುಸು ಮುಂಚಿತವಾಗಿ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಇಂದು ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ್ದು, ರೇಣುಕಾಸ್ವಾಮಿ ಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳು ಮತ್ತೆ ಜೈಲು ಸೇರಲಿದ್ದಾರೆ.

ಜಾಮೀನು ಪಡೆದು ಸ್ವತಂತ್ರ್ಯ ಹಕ್ಕಿಯಾಗಿದ್ದ ದರ್ಶನ್ ಈಗ ಮತ್ತೆ ಜೈಲು ಸೇರುತ್ತಿದ್ದಾರೆ. ಈ ಬಾರಿ ಸುಪ್ರೀಂಕೋರ್ಟ್​ನಿಂದಲೇ ಜಾಮೀನು ರದ್ದು ಆದೇಶ ಹೊರಬಿದ್ದಿದೆ. ಜಾಮೀನು ರದ್ದು ಮಾಡಿರುವುದು ಮಾತ್ರವೇ ಅಲ್ಲದೆ, ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮತ್ತೊಮ್ಮ ಹಾಗಾಗದಂತೆ ಎಚ್ಚರಿಕೆ ವಹಿಸುವಂತೆ ಕಠಿಣ ಎಚ್ಚರಿಕೆಯನ್ನೂ ಸಹ ನೀಡಿದೆ.

ಇದರಿಂದ ದರ್ಶನ್ ಈಗ ಮತ್ತೆ ಜೈಲು ಸೇರಲಿದ್ದು, ಅವರ ಮುಂದೆ ಈಗ ಇರುವ ಆಯ್ಕೆಗಳೇನು? ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಮೂಡಿದೆ. ದೇಶದ ಪರಮೋಚ್ಛ ನ್ಯಾಯಾಲಯವೇ ಜಾಮೀನು ರದ್ದು ಮಾಡಿರುವ ಕಾರಣ, ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವೂ ಸಹ ದರ್ಶನ್​ಗೆ ಸದ್ಯಕ್ಕೆ ಇಲ್ಲದಾಗಿದೆ. ಹಾಗಾಗಿ ಕನಿಷ್ಟ 6 ತಿಂಗಳುಗಳ ಕಾಲ ನಟ ದರ್ಶನ್ ಜೈಲಿನಲ್ಲಿ ಕಡ್ಡಾಯವಾಗಿ ಕಾಲ ಕಳೆಯಲೇಬೇಕಾಗಿದೆ. 6 ತಿಂಗಳ ಬಳಿಕ ದರ್ಶನ್ ಜಾಮೀನಿಗೆ ಮತ್ತೊಮ್ಮೆ ಅರ್ಜಿ ಹಾಕಬಹುದಾಗಿದೆ. ಅದೂ ಸಹ ಸುಪ್ರೀಂಕೋರ್ಟ್​​ನಲ್ಲಿಯೇ ಈ ಅರ್ಜಿ ಹಾಕಬೇಕಿದ್ದು ಅದರ ವಿಚಾರಣೆಗೆ ಸಾಕಷ್ಟು ಸಮಯವನ್ನು ಸುಪ್ರೀಂಕೋರ್ಟ್ ತೆಗೆದುಕೊಳ್ಳಲಿದೆ.

ಇದರ ಹೊರತಾಗಿ ದರ್ಶನ್​ ಆರೋಗ್ಯದ ನೆಪವೊಡ್ಡಿ ಮಧ್ಯಂತರ ಜಾಮೀನು ಪಡೆಯುವ ಅವಕಾಶ ಇದೆ. ಆದರೆ ಅದಕ್ಕೆ ದರ್ಶನ್​ಗೆ ನಿಜವಾಗಿಯೂ ಅನಾರೋಗ್ಯ ಇರಬೇಕಾಗುತ್ತದೆ. ಕಳೆದ ಬಾರಿಯಂತೆ ಶಸ್ತ್ರಚಿಕಿತ್ಸೆಯ ಕಾರಣ ನೀಡಿ ಆ ಬಳಿಕ ಕೇವಲ ಫಿಸಿಯೋಥೆರಪಿಗೆ ಸೀಮಿತವಾಗುವಂತಿಲ್ಲ. ಗಂಭೀರ ಆರೋಗ್ಯದ ಸಮಸ್ಯೆ ಇದ್ದಲ್ಲಿ ಮಾತ್ರವೇ ದರ್ಶನ್​ಗೆ ಮಧ್ಯಂತರ ಜಾಮೀನು ಸಿಗಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸೆಷನ್ಸ್​ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ನ್ಯಾಯಾಲಯವು ಲಘು ಬಗೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿ ಒಂದೊಮ್ಮೆ ದರ್ಶನ್ ಹಾಗೂ ಇತರೆ ಆರೋಪಿಗಳದ್ದು ತಪ್ಪಿಲ್ಲ ಎಂದು ತೀರ್ಪು ಪ್ರಕಟಿಸಿದರೆ ದರ್ಶನ್ ಜೈಲಿನಿಂದ ಬಿಡುಗಡೆ ಆಗಬಹುದಾಗಿದೆ. ಆದರೆ ಈ ಸಾಧ್ಯತೆ ಬಹಳ ಕಡಿಮೆ. ದರ್ಶನ್​ಗೆ ಈ ಪ್ರಕರಣದಲ್ಲಿ ಶಿಕ್ಷೆ ಆಗುವುದು ಖಂಡಿತ ಎನ್ನಲಾಗುತ್ತಿದೆ.

ಇನ್ನೂ ಒಂದು ಆಯ್ಕೆ ಎಂದರೆ. ಸೆಷನ್ಸ್ ನ್ಯಾಯಾಲಯದಲ್ಲಿ ದರ್ಶನ್​ಗೆ ಶಿಕ್ಷೆ ಆಗಿ, ಆ ಶಿಕ್ಷೆಯ ಅವಧಿಯನ್ನು ದರ್ಶನ್ ಪೂರ್ಣಗೊಳಿಸಿದರೆ ದರ್ಶನ್​ ಜೈಲಿನಿಂದ ಬಿಡುಗಡೆ ಹೊಂದಬಹುದು. ಆದರೆ ಇದು ಶೀಘ್ರವಾಗಿ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!