Headlines

ಧರ್ಮಸ್ಥಳ ಕೇಸ್: ಅನಾಮಿಕನನ್ನು ವಶಕ್ಕೆ ಪಡೆಯಲು ಎಸ್ಐಟಿ ಚಿಂತನೆ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ನೀಡಿರುವ ದೂರಿನಂತೆ ನಡೆಸಲಾಗುತ್ತಿದ್ದ ಉತ್ಖನನವನ್ನು ಸದ್ಯಕ್ಕೆ ಸ್ಥಗಿತಗೊಳಿಸಿರುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ ಸೋಮವಾರ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಎಸ್​ಐಟಿ ಅನಾಮಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ದೂರಿನ ಮೇಲೆಯೇ ಸದ್ಯ ಅನುಮಾನ ವ್ಯಕ್ತವಾದ ಕಾರಣ ಆತನನ್ನು ವಶಕ್ಕೆ ಪಡೆಯಲು ಎಸ್​ಐಟಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ದೂರುದಾರ ಅನಾಮಿಕನನ್ನು ಸುಪರ್ದಿಗೆ ಪಡೆದು ವಿಚಾರಣೆಗೆ ಒಳಪಡಿಸಿದರೆ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆ ಇರುವುದರಿಂದ ಈ ಕ್ರಮಕ್ಕೆ ಎಸ್​ಐಟಿ ಮುಂದಾಗಿದೆ ಎನ್ನಲಾಗಿದೆ. ಆದರೆ, ದೂರುದಾರ ಸಾಕ್ಷ್ಯವೂ ಆಗಿರುವುದರಿಂದ ಆತನನ್ನು ವಶಕ್ಕೆ ಪಡೆಯಲು ಕಾನೂನು ತೊಡಕು ಎದುರಾಗಿದೆ.

ಅನಾಮಿಕನ ವಶಕ್ಕೆ ಪಡೆಯಲು ಎಸ್​ಐಟಿಗಿರುವ ಕಾನೂನು ತೊಡಕೇನು?
ಅನಾಮಿಕ ದೂರುದಾರನನ್ನು ಸದ್ಯದ ಮಟ್ಟಿಗೆ ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಹೀಗಾಗಿ, ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಆತ ರಕ್ಷಣೆಯಲ್ಲಿದ್ದಾನೆ. ಇದರಿಂದಾಗಿ ಆತನನ್ನು ವಶಕ್ಕೆ ಪಡೆಯುವುದು ಅಥವಾ ಬಂಧಿಸುವುದು ಸಾಧ್ಯವಿಲ್ಲ.

ಆದಾಗ್ಯೂ, ಕೆಲವು ಪ್ರಬಲ ವಿಚಾರಗಳನ್ನು ಮುಂದಿಟ್ಟುಕೊಂಡು ಆತನನ್ನು ವಶಕ್ಕೆ ಪಡೆಯಲು ಎಸ್​ಐಟಿ ಉದ್ದೇಶಿಸಿದೆ ಎನ್ನಲಾಗಿದೆ. ಕೆಲ ಪ್ರಬಲ ಸಾಕ್ಷ್ಯಗಳ ಮೂಲಕ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಎಸ್ಐಟಿ ಪ್ಲಾನ್ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಅನಾಮಿಕನ ವಶಕ್ಕೆ ಪಡೆಯಲು ಎಸ್​ಐಟಿ ಮುಂದಿರುವ ಆಯ್ಕೆಗಳೇನು?
ಸುಳ್ಳು ಮಾಹಿತಿ ನೀಡಿದ ಅನುಮಾನವಿದೆ ಎಂದು ಕೋರ್ಟ್​​ಗೆ ವರದಿ ನೀಡುವ ಸಾಧ್ಯತೆ.
ಈ ಮೂಲಕ ನ್ಯಾಯಾಲಯದಿಂದ ಅನಾಮಿಕನ ಬಂಧನಕ್ಕೆ ಅನುಮತಿ ಪಡೆಯಬಹುದು.
ಸುಳ್ಳು ದೂರು ಅಥವಾ ತನಿಖೆಗೆ ಅಡ್ಡಿ ಆರೋಪಿಸಿ ಬೇರೆ FIR ದಾಖಲಿಸಿ ಬಂಧಿಸಬಹುದು.
ಅನಾಮಿಕ ನೀಡಿದ ಮಾಹಿತಿಯು ಸುಳ್ಳು ಎಂದು ಸಾಕ್ಷ್ಯಗಳ ಮೂಲಕ ಸಾಬೀತು ಪಡಿಸಬೇಕು. ಆಗ Witness Protection Act ಗಡಿಯಲ್ಲಿ ಅವನಿಗೆ ದೊರೆಯುವ ರಕ್ಷಣೆ ಹಿಂತೆಗೆತ ಸಾಧ್ಯತೆ.
ಎಸ್ಐಟಿ ಬಳಿ ಅನಾಮಿಕನ ವಿರುದ್ಧ ಸುಳ್ಳು ಮಾಹಿತಿ, ತಪ್ಪು ದೂರು, ತನಿಖೆಗೆ ಅಡ್ಡಿ ಕೊಟ್ಟಿದ್ದಾನೆ ಎಂಬ ಸಾಕ್ಷ್ಯ ಇರಬೇಕು.
ಎಸ್ಐಟಿ ಆತನ ವಿರುದ್ಧ ಹೊಸ FIR (BNS 209, 227, 229 ಇತ್ಯಾದಿ ಅಡಿಯಲ್ಲಿ) ದಾಖಲಿಸಬಹುದು ಅಥವಾ ಇದೇ ಸಾಕ್ಷ್ಯಗಳ ಆಧಾರದಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.
ಅನಾಮಿಕ ಸಾಕ್ಷಿ ಸುಳ್ಳು ಮಾಹಿತಿ ನೀಡಿದ್ದಾನೆ, ತನಿಖೆಗೆ ಅಡ್ಡಿಪಡಿಸಿದ್ದಾನೆ ಎಂಬ ನಿಖರ ಕಾರಣ ನೀಡುವುದು.
ಅವನ ಹೇಳಿಕೆ ಮತ್ತು ನಂತರ ಪತ್ತೆಯಾದ ವಾಸ್ತವಾಂಶಗಳ ನಡುವಿನ ವೈರುಧ್ಯವನ್ನು ಕೋರ್ಟ್​ಗೆ ಮನವರಿಕೆ ಮಾಡಿಕೊಡುವುದು.
ಉತ್ಖನನದಲ್ಲಿ ಏನೂ ಸಿಗದಿರುವುದರ ಜೊತೆಗೆ ತಜ್ಞರ ಪ್ರಾಥಮಿಕ ವರದಿಗಳನ್ನು ಸಲ್ಲಿಸುವುದು.

ಅನಾಮಿಕನ ಬಗ್ಗೆ ಕೋರ್ಟ್​​ಗೆ ಮನವರಿಕೆ ಮಾಡಿಕೊಟ್ಟರೆ ಆಗ ಆತನನ್ನು ಸಾಕ್ಷಿಯಿಂದ ಆರೋಪಿಯಾಗಿ ಬದಲಾಯಿಸಲು ತಕ್ಕ ಆಧಾರ ಇದೆಯೇ ಎಂದು ಕೋರ್ಟ್ ನಿರ್ಧರಿಸುತ್ತದೆ. ಒಂದು ವೇಳೆ ಕೋರ್ಟ್​​, ಅನಾಮಿಕನನ್ನು ಆರೋಪಿಯನ್ನಾಗಿಸಲು ಅನುಮತಿ ನೀಡಿದರೆ ಆಗ ಎಸ್​ಐಟಿ ವಶಕ್ಕೆ ಪಡೆಯಬಹುದಾಗಿದೆ. ಹೀಗಾಗಿ ಹಲವು ಆಯಾಮಗಳಲ್ಲಿ ಸಾಕ್ಷ್ಯ ಸಂಗ್ರಹಿಸಿ ಕೋರ್ಟ್​ಗೆ ಸಲ್ಲಿಸಲು ಎಸ್ಐಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

Leave a Reply

Your email address will not be published. Required fields are marked *

error: Content is protected !!