Headlines

ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಗೊಳಿಸುವ ವಿವಾದಾತ್ಮಕ ಮಸೂದೆ ಲೋಕಸಭೆಯಲ್ಲಿ ಮಂಡನೆ

ನವದೆಹಲಿ, ಆ.20: ಆರೋಪ ಸಾಬೀತಾಗದೇ ಇದ್ದರೂ ವಿಚಾರಣೆ ಹಂತದಲ್ಲಿ 30 ದಿನಕ್ಕಿಂತ ಹೆಚ್ಚು ಅವಧಿ ಜೈಲಿನಲ್ಲಿದ್ದರೆ ಪ್ರಧಾನಿ ಹಾಗೂ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬಹುದು ಎಂಬ ವಿವಾದಾತ್ಮಕ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಸಚಿವ ಅಮಿತ್ ಶಾ ಬುಧವಾರ ಮೂರು ತಿದ್ದುಪಡಿ ಮಸೂದೆಗಳನ್ನು ಮಂಡಿಸಿದ್ದು, ಇದರಲ್ಲಿ ಪ್ರಮುಖವಾದ ಆರೋಪ ಸಾಬೀತಾಗದೇ ಇದ್ದರೂ 30 ದಿನ ಜೈಲಲ್ಲಿ ಇದ್ದ ಯಾವುದೇ ವ್ಯಕ್ತಿಯನ್ನು ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನದಿಂದ ಪದಚ್ಯುತಗೊಳಿಸಬಹುದು ಎಂಬ ಮಸೂದೆ ಪ್ರಮುಖವಾಗಿತ್ತು.

ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಅಥವಾ ತನಿಖಾ ಸಂಸ್ಥೆಗಳಿಂದ ಗಣ್ಯ ವ್ಯಕ್ತಿ ಬಂಧನ ಅಥವಾ ವಶಕ್ಕೆ ಪಡೆದ 30 ದಿನದವರೆಗೂ ಜೈಲಲ್ಲಿ ಇದ್ದರೆ ಸಚಿವರು ಸೇರಿದಂತೆ ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿದ್ದರೂ ವಜಾಗೊಳಿಸಬಹುದಾಗಿದೆ.

ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪ್ರತಿಭಟಿಸಿದ ವಿರೋಧ ಪಕ್ಷಗಳು ಇದನ್ನು “ಕಠೋರ” ಎಂದು ಬಣ್ಣಿಸಿವೆ ಮತ್ತು ಆಡಳಿತಾರೂಢ ಬಿಜೆಪಿ ದೇಶವನ್ನು “ಪೊಲೀಸ್ ರಾಜ್ಯ”ವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿವೆ.

ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, “ಇದು ಸಂವಿಧಾನದ ಎಲ್ಲಾ ಆಶಯಗಳಿಗೂ ವಿರುದ್ಧವಾಗಿರುವುದರಿಂದ ನಾನು ಇದನ್ನು ಸಂಪೂರ್ಣವಾಗಿ ಕಠಿಣ ವಿಷಯವೆಂದು ನೋಡುತ್ತೇನೆ. ಇದನ್ನು ಭ್ರಷ್ಟಾಚಾರ ವಿರೋಧಿ ಕ್ರಮ ಎಂದು ಹೇಳುವುದು ಜನರ ಕಣ್ಣುಗಳಿಗೆ ಮುಸುಕನ್ನು ಎಳೆಯುವುದು ಎಂದು ಟೀಕಿಸಿದ್ದಾರೆ.

ನಾಳೆ, ನೀವು ಮುಖ್ಯಮಂತ್ರಿಯ ಮೇಲೆ ಯಾವುದೇ ರೀತಿಯ ಪ್ರಕರಣವನ್ನು ಹಾಕಬಹುದು, ಅವರನ್ನು 30 ದಿನಗಳವರೆಗೆ ಶಿಕ್ಷೆಯಿಲ್ಲದೆ ಬಂಧಿಸಬಹುದು ಮತ್ತು ಅವರು ಮುಖ್ಯಮಂತ್ರಿಯಾಗುವುದನ್ನು ನಿಲ್ಲಿಸುತ್ತಾರೆ. ಇದು ಸಂಪೂರ್ಣವಾಗಿ ಸಾಂವಿಧಾನಿಕ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ಅತ್ಯಂತ ದುರದೃಷ್ಟಕರ ಎಂದು ಅವರು ಹೇಳಿದರು.

ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತನಾಡಿ, ಬಿಜೆಪಿ ಸರ್ಕಾರ ದೇಶವನ್ನು “ಪೊಲೀಸ್ ರಾಜ್ಯ”ವನ್ನಾಗಿ ಮಾಡಲು ಬಯಸುತ್ತಿದೆ. “ಈ ಮಸೂದೆ ಸಂವಿಧಾನಬಾಹಿರ. ಪ್ರಧಾನಿಯನ್ನು ಯಾರು ಬಂಧಿಸುತ್ತಾರೆ?… ಒಟ್ಟಾರೆಯಾಗಿ, ಬಿಜೆಪಿ ಸರ್ಕಾರ ಈ ಮಸೂದೆಗಳ ಮೂಲಕ ನಮ್ಮ ದೇಶವನ್ನು ಪೊಲೀಸ್ ರಾಜ್ಯವನ್ನಾಗಿ ಮಾಡಲು ಬಯಸುತ್ತಿದೆ. ನಾವು ಅವುಗಳನ್ನು ವಿರೋಧಿಸುತ್ತೇವೆ… ಅಧಿಕಾರ ಶಾಶ್ವತವಲ್ಲ ಎಂಬುದನ್ನು ಬಿಜೆಪಿ ಮರೆಯುತ್ತಿದೆ” ಎಂದು ಅವರು ಹೇಳಿದರು.

ಬಿಜೆಪಿ ಸಂಸದರಾದ ಮನನ್ ಕುಮಾರ್ ಮಿಶ್ರಾ ವಿವಾದಾತ್ಮಕ ಮಸೂದೆಯನ್ನು ಬೆಂಬಲಿಸಿದ್ದು, ಇದು ಪ್ರಮುಖವಾದ ಮಸೂದೆ ಆಗಿದೆ. ಆದರೆ ಪ್ರತಿಪಕ್ಷಗಳು ಸಾರ್ವಜನಿಕರ ಗಮನ ಸೆಳೆಯಲು ಸುಮ್ಮನೆ ವಿರೋಧ ಮಾಡುತ್ತಿವೆ ಎಂದು ಆರೋಪಿಸಿದರು.

ಈ ಹಿಂದೆ ಜನಪ್ರತಿನಿಧಿಗಳ ವಿರುದ್ಧದ ಆರೋಪ ಸಾಬಿತಾದರೆ ಮಾತ್ರ ರಾಜಕೀಯದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಬೇಕಿತ್ತು. ಆದರೆ ಇದೀಗ ಆರೋಪ ಸಾಬೀತಾಗದೇ ಇದ್ದರೂ ವಿಚಾರಣೆ ಹಂತದಲ್ಲಿದ್ದಾಗಲೇ 30 ದಿನಕ್ಕಿಂತ ಹೆಚ್ಚು ಅವಧಿಯವರೆಗೆ ಜೈಲಿನಲ್ಲಿದ್ದರೆ ಪ್ರಧಾನಿ ಹಾಗೂ ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರನ್ನೂ ಪದಚ್ಯುತಗೊಳಿಸಬಹುದಾಗಿದೆ.

ಈಗಾಗಲೇ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜಾಮೀನು ರಹಿತ ಪ್ರಕರಣ ದಾಖಲಿಸಿ ಹಲವು ನಾಯಕರನ್ನು ಜೈಲಿಗೆ ಕಳುಹಿಸಿದೆ. ಆದರೆ ಆರೋಪ ಸಾಬೀತಾಗದೇ ಇದ್ದರೂ ಹಲವು ತಿಂಗಳು ವರ್ಷಗಳ ಕಾಲ ಜೈಲಿನಲ್ಲಿದ್ದ ಉದಾಹರಣೆಗಳೂ ಇವೆ.

Leave a Reply

Your email address will not be published. Required fields are marked *

error: Content is protected !!