ಬೆಂಗಳೂರು, ಆ.31: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಾಲ್ಕೈದು ತಿಂಗಳ ಹಿಂದೆಯೇ ಬೆಂಗಳೂರಿನ ಎಸ್‌ಪಿ ಮ್ಯಾನ್ಷನ್ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಷಡ್ಯಂತ್ರ ಸಿದ್ಧಗೊಂಡಿತ್ತು ಎಂಬ ರಹಸ್ಯ ಇದೀಗ ಬಯಲಾಗಿದೆ. ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ಹಿಂದೆ ದೆಹಲಿಯ ಖ್ಯಾತ ವ್ಯಕ್ತಿಯೊಬ್ಬರು ಬೆಂಬಲವಾಗಿದ್ದರು ಎಂಬ ಮಹತ್ವದ ಮಾಹಿತಿಯ ಬೆನ್ನು ಹತ್ತಿ ಎಸ್‌ಐಟಿ ತನಿಖೆ ಮುಂದುವರೆಸಿದೆ.
ಬೆಂಗಳೂರಿನ ವಿದ್ಯಾರಣ್ಯಪುರಂನ ತಿಂಡ್ಲು ಸರ್ಕಲ್‌ನಲ್ಲಿರುವ ಲಾಡ್ಜ್ ವೊಂದರಲ್ಲಿ ಹಲವು ಬಾರಿ ಸಭೆ ಸೇರಿ ಸೂತ್ರದಾರಿಗಳು ಹಾಗೂ ಪಾತ್ರಧಾರಿಗಳು ಚರ್ಚೆ ನಡೆಸಿರುವ ಮಾಹಿತಿ ಕೂಡ ತಿಳಿದುಬಂದಿದೆ. ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಅವರುಗಳಿಗೆ ಸೇರಿದ ಬೆಂಗಳೂರಿನ ನಿವಾಸಗಳಲ್ಲಿ ಹಾಗೂ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಷಡ್ಯಂತ್ರದ ಕೇಂದ್ರ ಬಿಂದು ಬುರುಡೆಯ ಮೂಲ ಪತ್ತೆ ಹಚ್ಚಲು ಬೆನ್ನು ಬಿದ್ದಿರುವ ಎಸ್‌ಐಟಿ ಅಧಿಕಾರಿಗಳು, ಅದನ್ನು ಎಲ್ಲಿಂದ ತರಲಾಗಿತ್ತು? ಎಲ್ಲೆಲ್ಲಿ ಇರಿಸಲಾಗಿತ್ತು? ಎಂಬ ವಿಚಾರಗಳನ್ನು ತನಿಖೆ ನಡೆಸುತ್ತಿದ್ದಾರೆ.
ಬುರುಡೆಯನ್ನು ಜೊತೆಯಲ್ಲಿಟ್ಟು ಚಿನ್ನಯ್ಯ ಹಾಗೂ ಜಯಂತ್ ಟಿ. ದೆಹಲಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು. ಉಳಿದ ಕೆಲವು ಪ್ರಮುಖರು ವಿಮಾನದಲ್ಲಿ ಪ್ರಯಾಣಿಸಿ, ದೆಹಲಿಯಲ್ಲಿ ಖ್ಯಾತ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದರು. ಜೊತೆಗೆ ಸುಪ್ರೀಂಕೋರ್ಟ್‌ನ ವಕೀಲರೊಬ್ಬರ ಜೊತೆಯೂ ಚರ್ಚೆ ಮಾಡಿದರು ಎಂದು ಮೂಲಗಳು ತಿಳಿಸಿವೆ.
ವಿಮಾನದಲ್ಲಿ ಪ್ರಯಾಣಿಸಿದರೆ ತಪಾಸಣೆ ಬಿಗಿಯಾಗಿದ್ದು, ಬುರುಡೆ ಸಾಗಿಸಲು ಅವಕಾಶವಿರುವುದಿಲ್ಲ ಎಂಬ ಕಾರಣಕ್ಕೆ ಜಯಂತ್ ಹಾಗೂ ಚಿನ್ನಯ್ಯ ರೈಲಿನಲ್ಲಿ ಪ್ರಯಾಣಿಸಿದ್ದಾರೆಂದು ತಿಳಿದುಬಂದಿದೆ. ದೆಹಲಿಯಲ್ಲಿ ಚರ್ಚೆ ನಡೆದ ಬಳಿಕ ಎಸ್‌ಐಟಿ ರಚಿಸಲು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಲಾಗಿತ್ತು. ಅದಕ್ಕನುಗುಣವಾಗಿ ಕೆಲವು ಸನ್ನಿವೇಶಗಳನ್ನು ಸೃಷ್ಟಿಸಲಾಯಿತು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿ ಚಿನ್ನಯ್ಯನನ್ನು ಬೆಂಗಳೂರಿಗೆ ಕರೆ ತಂದಿರುವ ಎಸ್‌ಐಟಿ ಅಧಿಕಾರಿಗಳು ಜಯಂತ್ ಟಿ. ಮನೆಯಲ್ಲಿ ಸತತ 10 ಗಂಟೆಗಳ ಕಾಲ ನಿರಂತರವಾಗಿ ಶೋಧ ಹಾಗೂ ತನಿಖೆ ನಡೆಸಿದ್ದಾರೆ. ಪಂಚರ ಸಮುಖದಲ್ಲಿ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆೆ.
ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಯಾರ ಹೆಸರಿನಲ್ಲಿ ರೂಮ್ ಬುಕ್ ಆಗಿತ್ತು? ಹಣ ಪಾವತಿಸಿದವರು ಯಾರು? ಲಾಡ್ಜ್ ಗಳಲ್ಲಿ ತಂಗಲು ಖರ್ಚುವೆಚ್ಚಗಳನ್ನು ನೋಡಿಕೊಂಡವರು ಯಾರು? ಎಂಬೆಲ್ಲಾ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಲಾಡ್ಜ್ ಹಾಗೂ ಸರ್ವೀಸ್ ಅಪಾರ್ಟ್‌ಮೆಂಟ್‌ಗಳ ಗ್ರಾಹಕರ ನೋಂದಣಿ ರಿಜಿಸ್ಟರನ್ನು ಪರಿಶೀಲಿಸಿ ಜಪ್ತಿ ಮಾಡಲಾಗಿದೆ. ಯಾವ್ಯಾವ ಸ್ಥಳದಲ್ಲಿ ಯಾವ ರೀತಿಯ ಚರ್ಚೆಗಳು ನಡೆದಿದ್ದವು? ಮತ್ತು ಯಾವೆಲ್ಲಾ ಅಂಶಗಳನ್ನು ಬಳಸಿಕೊಳ್ಳಲಾಗಿತ್ತು? ಎಂಬ ಇಂಚಿಂಚು ಮಾಹಿತಿಯನ್ನು ಎಸ್‌ಐಟಿ ಕರಾರುವಾಕ್ಕಾಗಿ ಕಲೆ ಹಾಕಿ ಆರೋಪಿಯನ್ನು ಧರ್ಮಸ್ಥಳದ ವಿರುದ್ಧವಾಗಿ ನಡೆದಿರುವ ಷಡ್ಯಂತ್ರ ಸಂಕೀರ್ಣ ಹಾಗೂ ಸೂಕ್ಷ್ಮ ವಿಚಾರವಾಗಿದ್ದು, ಇದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸುವುದು ಸವಾಲು ಕಠಿಣವಾಗಿದೆ. ಅದನ್ನು ನಿಭಾಯಿಸುತ್ತಿರುವ ಎಸ್‌ಐಟಿ ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ನಡೆಸುತ್ತಿದೆ. ಷಡ್ಯಂತ್ರದ ಪ್ರಮುಖ ಸೂತ್ರಧಾರರು ಎಂದು ಭಾವಿಸಲಾಗಿರುವ ವ್ಯಕ್ತಿಗಳ ಮನೆಗಳಲ್ಲೂ ಶೋಧ ನಡೆಸಿದ್ದು, ಮುಂದಿನ ಹಂತದಲ್ಲಿ ಆರೋಪಿಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆಯಿದೆ.

