ನವದೆಹಲಿ, ಜುಲೈ 12: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯದ ಚೆಸ್ ಗೇಮ್ ಭರ್ಜರಿಯಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲೇ ಕೂತು ‘ನಾನೇ 5 ವರ್ಷ ಸಿಎಂ’ ಎಂಬ ಸಂದೇಶವನ್ನು ರಾಜಾರೋಷವಾಗಿ ಸಾರಿದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಗೆ ಸಚಿವರು ಪಟ್ಟು ಹಿಡಿದಿದ್ದಾರೆ. ಇದನ್ನೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಮುಂದೆ ಹೇಳಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ನಿಯಮ ಇದ್ದು ಅದನ್ನು ಅನುಷ್ಠಾನಕ್ಕೆ ತನ್ನಿ ಎಂದು ಸಚಿವರು ಆಗ್ರಹಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಸಚಿವರ ಒತ್ತಡಕ್ಕೆ ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ತಕ್ಷಣ ಇದನ್ನು ಮಂಡಿಸಬೇಕಿತ್ತು. ಸದ್ಯ ಬೇರೆ ರಾಜ್ಯಗಳ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಬದಲಾವಣೆ ಕಷ್ಟವಾಗುತ್ತದೆ. ಹೀಗಾಗಿ ನವೆಂಬರ್ ತನಕ ಯಾವುದೇ ಬದಲಾವಣೆಗಳು ಬೇಡ ಅಂತ ಹೇಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ಡಿ.ಕೆ ಶಿವಕುಮಾರ್ ಅವರಿಗೆ ಬಲಾಬಲ ಪ್ರದರ್ಶಿಸುವ ಅಗತ್ಯ ಇಲ್ಲ. ಪ್ರಾಮಾಣಿಕವಾಗಿ ಪಕ್ಷವನ್ನ ಮುನ್ನಡೆಸುತ್ತಿದ್ದಾರೆ. ಆದ್ದರಿಂದ ಯಾವುದೇ ಶಾಸಕರ ಬೆಂಬಲ ಕೇಳುವ ಸಮಯ ಅಲ್ಲ ಇದು ಅಂತ ಹೇಳಿದ್ದಾರೆ.

