Headlines

ಕೆ.ಎನ್ ರಾಜಣ್ಣ ಸಂಪುಟದಿಂದ ವಜಾ ಹಿನ್ನೆಲೆ: ಮಧುಗಿರಿಯಲ್ಲಿ ಬೆಂಬಲಿಗರಿಂದ ಭಾರೀ ಪ್ರತಿಭಟನೆ

ಮಧುಗಿರಿ, ಆಗಸ್ಟ್ 12: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದ ಕೆ.ಎನ್ ರಾಜಣ್ಣರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ. ಕಾಂಗ್ರೆಸ್​ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ ಇದನ್ನು ವಿರೋಧಿಸಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಕೆ.ಎನ್ ರಾಜಣ್ಣ ಅವರ ಬೆಂಬಲಿಗರು, ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ನೇಣು ಬಿಗಿದುಕೊಂಡು ಕೆಲ ಬೆಂಬಲಿಗರು ಯತ್ನಿಸಿದರೆ, ಮತ್ತೆ ಕೆಲವರು ಪೆಟ್ರೋಲ್ ಸುರಿದುಕೊಂಡು ಜೀವ ತೆಗೆದುಕೊಳ್ಳಲು ಯತ್ನಿಸಿದ್ದಾರೆ.

ಕೆ.ಎನ್ ರಾಜಣ್ಣರಿಂದ ರಾಜೀನಾಮೆ ಪಡೆದ ಕಾರಣ ಮಧುಗಿರಿಯ ಅಂಬೇಡ್ಕರ್ ವೃತ್ತದಲ್ಲಿ ಅವರ ನೂರಾರು ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಈ ವೇಳೆ ಆಘಾತಕಾರಿ ಘಟನೆಗಳು ನಡೆದಿವೆ. ಈ ವೇಳೆ ಇಬ್ಬರು ವ್ಯಕ್ತಿಗಳು ಕುತ್ತಿಗೆಗೆ ಹಗ್ಗ ಬಿಗಿದುಕೊಂಡು ಸಾವಿಗೆ ಯತ್ನ ಮಾಡಿದ್ದಾರೆ. ಇನ್ನೊಬ್ಬ ವಿಷ ಸೇವಿಸಿ ಜೀವ ತೆಗೆದುಕೊಳ್ಳಲು ಮುಂದಾಗಿದ್ದನು. ಮತ್ತೋರ್ವ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದನು.

ಆದರೆ ತಕ್ಷಣ ಪೊಲೀಸರು ಮಧ್ಯೆ ಪ್ರವೇಶಿಸಿ ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ. ಅವರ ಬಳಿ ಇದ್ದಂತಹ ಹಗ್ಗ, ಪೆಟ್ರೋಲ್ ಹಾಗೂ ವಿಷವನ್ನು ಕಸಿದುಕೊಂಡು ಪ್ರಾಣ ಕಾಪಾಡಿದ್ದಾರೆ. ಹೋರಾಟ ತೀವ್ರ ಮಟ್ಟದಲ್ಲಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಣ್ಣರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಬೆಂಬಲಿಗರು ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರವಾಗಿ ಖಂಡಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಮಧ್ಯಾಹ್ನ 1 ಗಂಟೆಯಿಂದ ಮಧುಗಿರಿ ಬಂದ್‌ಗೆ ಕರೆ ನೀಡಿದ್ದಾರೆ. ಕೆ.ಎನ್​ ರಾಜಣ್ಣರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!