ಗ್ರಾಪಂ ಅಧ್ಯಕ್ಷೆ ರೇಷ್ಮೆ ಇಲಾಖೆ ಜಾಗದಲ್ಲಿ ಅಕ್ರಮ ವಾಸ ತೆರವು ಹಾಗೂ ಇತರೆ ಸಮಸ್ಯೆಗಳ ಕುರಿತು ಕ್ರಮ ವಹಿಸಿ ಅಭಿವೃದ್ಧಿಗೆ ಮುಂದಾಗುವಂತೆ ಗ್ರಾಮಸ್ಥರು ಭಾಗಿನದೊಂದಿಗೆ ಮನವಿ ನೀಡಿದರು.

ಬೂದನೂರು ಗ್ರಾಮಸ್ಥರು ಹಾಗೂ ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಮಹಿಳೆಯರು ಅಧ್ಯಕ್ಷರ ಪೀಠದ ಮುಂದೆ ಭಾಗಿನವಿರಿಸಿ ನಿಮ್ಮ ಹಾಗೂ ಬೂದನೂರು ಗ್ರಾಮ ಪಂಚಾಯತಿ ಸದಸ್ಯರನ್ನು ಆಯ್ಕೆ ಮಾಡಿ ಗ್ರಾಮದ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತೀರಿ ಎಂಬ ನಮ್ಮ ಮಹಾದಾಸೆ ಈಡೇರಿಲ್ಲ ಎಂದು ಆರೋಪಿಸಿದರು.
ಗ್ರಾಮದ ಮೊದಲ ಪ್ರಜೆ ಹಾಗೂ ಗ್ರಾಮ ಪಂಚಾಯತಿಯ ಮುಖ್ಯಸ್ಥರಾದ ತಾವು ತಮ್ಮ ಆಸ್ತಿ ಕುರಿತು ಸುಳ್ಳು ಹೇಳುತ್ತಿರುವುದು ಶೋಭೆಯಲ್ಲ ಎಂದು ತಿಳಿದು ಕಣ್ಣೀರಾಗಿದ್ದೇವೆ. ರೇಷ್ಮೆ ಇಲಾಖೆ ಜಾಗ ಬಿಡಲು, ಬಿಡಿಸಲು ತಾವು ಹಾಗೂ ತಮ್ಮ ಆಡಳಿತ ಮಂಡಳಿ ಸದಸ್ಯರು ಪೂರ್ವಾಗ್ರಹಪೀಡಿತರಾಗಿ ವರ್ತಿಸುತ್ತಿರುವುದು ಸರಿಯಲ್ಲ. ರೇಷ್ಮೆ ಇಲಾಖೆ ಜಾಗ ಕಂದಾಯ ಇಲಾಖೆಗೆ ಸೇರಿದೆ ಎಂಬುದು ನಿಜ. ಆದರೆ ಸದರಿ ಜಾಗಕ್ಕೆ ತಮ್ಮ ಗ್ರಾಮ ಪಂಚಾಯತಿ ಅಕ್ರಮ, ನಿಯಮಬಾಹಿರ ಖಾತೆ ಮಾಡಿರುವುದನ್ನು ರದ್ದುಗೊಳಿಸಲು ಕ್ರಮ ವಹಿಸಲು ಹಾಗೂ ಜಾಗ ತೆರವುಗೊಳಿಸಲು ತಾವು ಮುಂದಾಳತ್ವ ವಹಿಸಿ ಎಂದು ಮನವಿ ಮಾಡಿ, ಸದರಿ ಜಾಗದಲ್ಲಿ ತಾವು ವಾಸ ಮಾಡುತ್ತಿರುವುದು ಅಕ್ರಮ ಬೆಂಬಲಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ತಾವೇ ಪೊಲೀಸರಿಗೆ ತಿಳಿಸಿದಂತೆ ಜಾಗ ಬಿಡಲು ಅಭ್ಯಂತರವಿಲ್ಲ ಎಂಬುದು ತಮ್ಮ ಜ್ಞಾನದಲ್ಲಿದೆ ಎಂದು ಭಾವಿಸುತ್ತೇವೆ ಎಂದು ನೆನಪಿಸಿದರು.
ಅಲ್ಲದೆ ಗ್ರಾಪಂ ಖರೀದಿ, ಬ್ಯಾಂಕ್ ಕಾಲೋನಿ ಪರಿಹಾರ ಅಕ್ರಮ ಹಾಗೂ ಕಾಮಗಾರಿ ಆಯ್ಕೆಯಲ್ಲಿ ನಿಯಮಪಾಲನೆ ಮಾಡದಿರುವುದು ಸೇರಿದಂತೆ ಹಲವು ಅಧ್ವಾನಗಳಾಗುತ್ತಿವೆ. ಮಂಗಯ್ಯನಗರದ ವಿಕಲಚೇತನರ ಶೌಚಾಲಯ ಕಳ್ಳತನವಾಗಿರುವುದು ದುರಂತವೇ ಸರಿ. ಗ್ರಾಮದ ಹತ್ತಾರು ಕಡೆ ಬೀದಿದೀಪ ಸ್ಥಗಿತಗೊಳಿಸಿ ತಿಂಗಳಾದರೂ ಕ್ರಮ ವಹಿಸದಿರುವುದು ಆಡಳಿತ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹು ಮುಖ್ಯವಾಗಿ ತಾವು ಸೇರಿದಂತೆ ತಮ್ಮ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ಗ್ರಾಮದ ನಿವೇಶನ, ವಸತಿರಹಿತರ ವಿಚಾರದಲ್ಲಿ ತಟಸ್ಥ ಧೋರಣೆ ಅನುಸರಿಸಿ ಬಡವರು, ಪರಿಶಿಷ್ಟರು ನರಳುತ್ತಿರುವ ವಿಚಾರ ಮಾನವೀಯತೆ ತುಂಬಿರುವ ನಿಮಗೆ ತಿಳಿದಿದೆ ಎಂದು ಭಾವಿಸಿದ್ದೇವೆ. ಅ ಕುರಿತಂತೆ ತಾವು ಪ್ರಶ್ನಿಸಿದವರ ವಿರುದ್ದ ಸುಳ್ಳು ಪೊಲೀಸ್ ದೂರು ನೀಡಿ ನ್ಯಾಯಾಲಯದ ಕಟಕಟೆ ಹತ್ತಿಸಿದ್ದು ಪಂಚಾಯತಿ ಇತಿಹಾಸದಲ್ಲಿ ದಾಖಲಾಯಿತು. ಮುಂದುವರಿದು ನಮ್ಮ ಹೋರಾಟಗಾರ ಸತೀಶ್ (ಬೂಸ) ಕುಮ್ಮಕ್ಕು ಅಂತ ಮತ್ತೊಂದು ಹಸಿ ಸುಳ್ಳಿನ ದೂರು ದಾಖಲಿಸಿರುವುದು ನಿಮ್ಮ ಜನಪರ ಧೋರಣೆ ಅಣಕಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾವು ತಮ್ಮ ವಾಸಸ್ಥಳದ ಕುರಿತು ತಹಶೀಲ್ದಾರ್, ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರಿಗೆ ನೀಡಿರುವ ದೂರಿನ ಪ್ರತಿಯನ್ನು ಮತ್ತೊಮ್ಮೆ ಓದಲು ವಿನಂತಿಸುತ್ತೇವೆ ಎಂದ ಅವರು, ಕಡೆಯದಾಗಿ ತಾವು ಜನಪರ, ಪರಿಶಿಷ್ಟ, ಬಡವರ ಪರವಾದ ಧೋರಣೆ ಹೊಂದಿ ಅಭಿವೃದ್ಧಿಗೆ ಪೂರಕವಾದ ಕರ್ತವ್ಯ ನಿರ್ವಹಿಸಲು ಮನವಿ ಮಾಡುತ್ತಾ ಭಾಗಿನ ನೀಡುತ್ತಿದ್ದೇವೆ. ತಾವು ಸಮಾಜವಿರೋಧಿ, ಅಭಿವೃದ್ಧಿ ಕಂಟಕರ ಮಾತು ಬದಿಗಿರಿಸಿ ಮನಃಸಾಕ್ಷಿಯಂತೆ ಉಳಿದ ಅಧಿಕಾರವಧಿ ಪೊರೈಸಲೆಂದು ಅಶಿಸಿದರು
ಈ ವೇಳೆ ಮುಖಂಡರಾದ ಸತೀಶ್ ಬೂಸ, ರೈತ ಮುಖಂಡ ಪುಟ್ಟಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಕುಳ್ಳ, ಲಕ್ಷ್ಮಿ ಸೇರಿದಂತೆ ಹಲವರಿದ್ದರು.

