ಬೆಂಗಳೂರು,ನ.15: ಕೆಎಂಎಫ್ ನ ಜನಪ್ರಿಯ ಬ್ರಾಂಡ್ ನಂದಿನಿ ತುಪ್ಪವನ್ನು ನಕಲಿ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸಿರುವ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಹೊರ ರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ತಯಾರಿಸಿ ನಕಲಿ ನಂದಿನಿ ಬ್ರಾಂಡ್‌ನ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ಬೆಂಗಳೂರು ನಗರದಾದ್ಯಂತ ಮಾರಾಟ ಮಾಡುತ್ತಿದ್ದರು.
ಈ ಬೃಹತ್ ಜಾಲದ ಬೆನ್ನು ಹತ್ತಿತ ಪೊಲೀಸರು ನಾಲ್ವರನ್ನು ಬಂಧಿಸುವ ಜೊತೆಗೆ 1,26,95,200 ರೂ. ವೌಲ್ಯದ 8136 ಲೀಟರ್ ನಂದಿನಿ ಬ್ರಾಂಡ್‌ನ ಕಲಬೆರೆಕೆ ತುಪ್ಪ ಹಾಗೂ ಸರಬರಾಜು ಮಾಡುತ್ತಿದ್ದ 4 ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ. ಜೊತೆಗೆ ಕಲಬೆರಕೆ ನಂದಿನಿ ತುಪ್ಪವನ್ನು ತಯಾರು ಮಾಡಲು ಬಳಸುತ್ತಿದ್ದ ಯಂತ್ರೋಪಕರಣಗಳು, ತೆಂಗು ಮತ್ತು ಪಾಮ್ ಆಯಿಲ್ ಎಣ್ಣೆಗಳ ಜಪ್ತಿ ಮಾಡಿದ್ದಾರೆ.
ನಂದಿನಿ ತುಪ್ಪದ ಬಹುಬೇಡಿಕೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪಿಗಳು, ತಮಿಳುನಾಡು ರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ಸಿದ್ದಪಡಿಸಿ, ನಕಲಿ ನಂದಿನಿ ತುಪ್ಪದ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬುತ್ತಿದ್ದರು. ನಂತರ ಕೆ.ಎಂ.ಎ್.ನ ಅಧಿಕೃತ ಪರವಾನಗಿಯನ್ನು ಪಡೆದಂತಹ ಬೆಂಗಳೂರಿನ ಡೀಲರ್‌ಗಳಿಗೆ ಸರಬರಾಜು ಮಾಡುತ್ತಿದ್ದರು.
ಜಾಲದ ಜೊತೆಗೆ ಶಾಮೀಲಾದ ಆರೋಪಿ ಡೀಲರ್‌ಗಳು ಕಲಬೆರೆಕೆ ನಂದಿನಿ ತುಪ್ಪದ ಸ್ಯಾಚೆಟ್ ಮತ್ತು ಬಾಟಲ್‌ಗಳನ್ನು ಅಸಲಿಯೆಂದು ಬಿಂಬಿಸಿ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ವಿವಿಧ ಸಗಟು, ಚಿಲ್ಲರೆ ಮತ್ತು ನಂದಿನಿ ಪಾರ್ಲರ್‌ಗಳಿಗೆ ಮೂಲಕ ನಂದಿನಿ ತುಪ್ಪದ ಬೆಲೆಗೆ ಕಲಬೆರೆಕೆ ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಬಗ್ಗೆ ಸಿ.ಸಿ.ಬಿ. ವಿಶೇಷ ವಿಚಾರಣಾ ದಳ ಮತ್ತು ಕೆ.ಎಂ.ಎಫ್ ಜಾಗೃತ ದಳದ ಅಧಿಕಾರಿಗಳು ಗುಪ್ತವಾಗಿ ಮಾಹಿತಿ ಸಂಗ್ರಹಿಸಿದ್ದರು.
ನಿನ್ನೆ ಸಿ.ಸಿ.ಬಿ. ವಿಶೇಷ ವಿಚಾರಣಾ ದಳ ಮತ್ತು ಕೆ.ಎಂ.ಎ್. ಜಾಗೃತ ದಳದ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಚಾಮರಾಜಪೇಟೆಯ ನಂಜಾಂಬ ಅಗ್ರಹಾರದ ಕೃಷ್ಣ ಎಂಟರ್ ಪ್ರೈಸಸ್‌ನ ಮಾಲೀಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಗೋಡೌನ್ ಮತ್ತು ಅಂಗಡಿಗಳ ಸರಕು ಸಾಗಾಣಿಕೆ ವಾಹನಗಳ ಮೇಲೆ ದಾಳಿ ನಡೆಸಿದ್ದರು.
ದಾಳಿಯ ವೇಳೆ ತಮಿಳುನಾಡಿನಲ್ಲಿ ಕಲಬೆರಕೆ ತುಪ್ಪವನ್ನು ತಯಾರಿಸಿ, ನಂದಿನಿ ಬ್ರಾಂಡ್‌ನ ಸ್ಯಾಚೆಟ್‌ಗಳಿಗೆ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ ಬೆಂಗಳೂರಿನ ಅಂಗಡಿಗಳಿಗೆ ಸಾಗಿಸುತ್ತಿದ್ದ ವಾಹನ ಚಾಲಕ ಮತ್ತು ಆತನು ಉಪಯೋಗಿಸುತ್ತಿದ್ದ ಸರಕು ಸಾಗಾಣಿಕೆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ 5 ಮೊಬೈಲ್‌ಗಳು, 60 ಲಕ್ಷ ರೂ. ಮಾಲ್ಯದ 4 ಬೊಲೇರೋ ಕಂಪನಿಯ ಸರಕು ಸಾಗಾಣಿಕೆಯ ವಾಹನಗಳು, ಕೃತ್ಯದಿಂದ ಸಂಪಾದಿಸಿದ 1,19,640 ರೂ. ನಗದು, 56,95,200 ರೂ. ಬೆಲೆ ಬಾಳುವ 8136 ಲೀಟರ್ ಕಲಬೆರಕೆಯ ತುಪ್ಪ ತುಂಬಿದ ವಿವಿಧ ನಮೂನೆಯ ನಕಲಿ ನಂದಿನಿ ಬ್ರಾಂಡ್‌ನ ಸ್ಯಾಚೆಟ್ ಮತ್ತು ಬಾಟಲಿಗಳು, ತೆಂಗು ಮತ್ತು ಪಾಮ್‌ಆಯಿಲ್ ತುಂಬಿದ ಕ್ಯಾನುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಬಗ್ಗೆ ಸಿಸಿಬಿ ತನಿಖೆ ಮುಂದುವರೆಸಿದೆ.

